ಕಾರವಾರ: ಆಧುನಿಕ ಜಗತ್ತಿನಲ್ಲಿ ಓದಲು, ಬರೆಯಲು ಬಂದರೆ ಮಾತ್ರ ಸಾಕ್ಷರರಲ್ಲ. ಜನ ಇಂದಿನ ದಿನಮಾನಕ್ಕೆ ತಕ್ಕಂತೆ ತಂತ್ರಜ್ಞಾನ ಅರಿತು ತಮ್ಮ ವ್ಯವಹಾರಗಳನ್ನು ಸ್ವತಃ ನಿಭಾಯಿಸಲು ಬರುವಂತಾಗಬೇಕು ಎಂದು ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಚೈತ್ರಾ ಕೊಠಾರಕರ್ ಹೇಳಿದರು.
ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸಾಕ್ಷರತಾ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದು ಸಾಕ್ಷರತೆ ಎಂದರೆ ವಿಜ್ಞಾನ, ತಂತ್ರಜ್ಞಾನ ಹಾಗೂ ಅಂತರ್ಜಾಲ ಬಳಕೆಯಂಥ ಮಾಹಿತಿಯನ್ನು ಪಡೆಯಬೇಕಿದೆ ಎಂದರು. ಮುಂದಿನ ದಿನದಲ್ಲಿ ಡಿಜಿಟಲ್ ತರಗತಿಗಳನ್ನು ಮಾಡುವ ಮೂಲಕ ಸಾಕ್ಷರತೆ ಪ್ರಮಾಣ ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಡಾ. ಸಂಗೀತ ಭಟ್ ಮಾತನಾಡಿ, ವಿದ್ಯೆಯೆಂಬುದು ಬರೆದಿಟ್ಟಿದ್ದನ್ನೆಲ್ಲಾ ಓದುವುದಲ್ಲ, ಅದನ್ನು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಂಡಾಗ ಸಾಕ್ಷರತೆಯ ಉದ್ದೇಶ ಈಡೇರುತ್ತದೆ ಎಂದರು. ಉಪಕಾರ್ಯದರ್ಶಿ ನಾಗೇಶ ರಾಯ್ಕರ್ ಇದ್ದರು. ಮಂಗಲಲಕ್ಷ್ಮೀ ಪಾಟೀಲ ಸ್ವಾಗತಿಸಿದರು. ಶೈಲಾ ಸಾಳುಂಕೆ ನಿರೂಪಸಿದರು, ದಿಲೀಪ್ ನಾಯ್ಕ ವಂದಿಸಿದರು. ಕಾರ್ಯಕ್ರಮದಲ್ಲಿ ಸಾಕ್ಷರತಾ ಪ್ರಮಾಣ ವಚನ ಸ್ವೀಕರಿಸಲಾಯಿತು.