ವಿಜಯವಾಣಿ ಸುದ್ದಿಜಾಲ ಧಾರವಾಡ
ಓದಿನಲ್ಲಿ ವಿದ್ಯಾರ್ಥಿಗಳಿಗೆ ಆಯ್ಕೆ ಸ್ವಾತಂತ್ರೃಇರಬೇಕು. ಆಸಕ್ತಿಗೆ ಅನುಗುಣವಾಗಿ ವಿಷಯಗಳನ್ನು ತೆಗೆದುಕೊಂಡು ಅಧ್ಯಯನ ಮಾಡಿ ಯಶಗಳಿಸುವಲ್ಲಿ ಪಾಲಕರ ಸಹಕಾರ ಮತ್ತು ಪಾತ್ರ ಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಸೋಮವಾರ ಆಯೋಜಿಸಿದ್ದ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಅತಿ ಹೆಚ್ಚು ಅಂಕ ಪಡೆದ ಅತ್ಯುತ್ತಮ 10 ವಿದ್ಯಾರ್ಥಿಗಳ ಗೌರವ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಓದಿನಲ್ಲಿ ವಿಷಯದ ಆಯ್ಕೆಯಲ್ಲಿ ಪಾಲಕರು ಒತ್ತಡ ಹಾಕಬಾರದು. ಆಸಕ್ತಿಯಂತೆ ಆಯ್ಕೆಗೆ ಸ್ವಾತಂತ್ರೃ ನೀಡಬೇಕು. ಇದರಿಂದ ಅವರ ಓದು ಉತ್ತಮವಾಗಿ ಒಳ್ಳೆ ಭವಿಷ್ಯ ನಿರ್ಮಾಣಕ್ಕೆ ಅನುಕೂಲವಾಗುತ್ತದೆ. ಪ್ರಸಕ್ತ ಸಾಲಿನಲ್ಲಿ ಸುಮಾರು 48 ಶಾಲೆಗಳು ನೂರಕ್ಕೆ ನೂರರಷ್ಟು ಫಲಿತಾಂಶ ಮಾಡಿವೆ. ಆದರೆ ಜಿಲ್ಲೆಯ ಒಟ್ಟಾರೆ ಸುಧಾರಣೆಗೆ ಶಿಕ್ಷಣ ಇಲಾಖೆ ಈಗಿನಿಂದಲೇ ಕ್ರಮವಹಿಸಬೇಕು. ಮುಂದಿನ ವರ್ಷದ ಫಲಿತಾಂಶದಲ್ಲಿ ಮೊದಲ ಮೂರು ರ‌್ಯಾಂಕ್ ಪಡೆಯುವ ಜಿಲ್ಲೆಗಳಲ್ಲಿ ನಮ್ಮ ಜಿಲ್ಲೆ ಸ್ಥಾನ ಪಡೆಯಬೇಕು ಎಂದರು.
ವಿದ್ಯಾರ್ಥಿಗಳ ಸಾಧನೆಗೆ ಪ್ರೋತ್ಸಾಹಿಸಿದ ಪಾಲಕರನ್ನು, ಶಿಕ್ಷಕರನ್ನು ಜಿಲ್ಲಾಧಿಕಾರಿ ಅಭಿನಂದಿಸಿದರು. ವಿದ್ಯಾರ್ಥಿಗಳ ಪಾಲಕರು, ಶಿಕ್ಷಕರು, ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾರಾಟಕ್ಕೆ ಸ್ವಾಗತಿಸಿದರು. ಎಸ್.ಎಂ.ಹುಡೇದಮನಿ ವಂದಿಸಿದರು.