ಎನ್.ಆರ್.ಪುರ: ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಬೇಕಾದರೆ ಓದಿನ ಕಡೆ ಹೆಚ್ಚಿನ ಆಸಕ್ತಿ ತೋರಬೇಕು ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಬಾಲಕೃಷ್ಣ ಭಟ್ ಹೇಳಿದರು.
ತಾಲೂಕಿನ ಶೆಟ್ಟಿಕೊಪ್ಪದ ಬರ್ಕ್‌ಮನ್ಸ್ ಪ್ರೌಢಶಾಲೆಯಲ್ಲಿ ಶನಿವಾರ ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಆಲಸ್ಯ, ನಿರ್ಲಕ್ಷ್ಯ ಭಾವ ಇರಬಾರದು. ಬೆಳಗ್ಗೆ ಬೇಗ ಏಳಬೇಕು. ಬೇಗ ಏಳುವುದರಿಂದ ಆರೋಗ್ಯಕರವಾದ ಆಲೋಚನೆಗಳು ಮೂಡುತ್ತವೆ. ಹೆಚ್ಚೆಚ್ಚು ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು. ಕ್ರೀಡೆಯಲ್ಲಿ ಆಸಕ್ತಿವಹಿಸುವುದರಿಂದ ಮನಸ್ಸು ಆರೋಗ್ಯಕರವಾಗಿರುತ್ತದೆ. ಉತ್ತಮ ಶಿಕ್ಷಣದಿಂದ ಉತ್ತಮ ಸಂಸ್ಕಾರ ಪಡೆಯಬೇಕು. ಇದರಿಂದ ಪಾಲಕರಿಗಲ್ಲದೆ, ಶಿಕ್ಷಣ ಕಲಿಸಿದ ಗುರುಗಳಿಗೂ ಗೌರವ ದೊರೆಯುತ್ತದೆ. ಕಣ್ಣಿಗೆ ಕಾಣುವ ದೇವರುಗಳೆಂದರೆ ತಂದೆ, ತಾಯಿಗಳು. ತಂದೆ ಹಾಗೂ ತಾಯಿಗೆ ನಿತ್ಯ ನಮಸ್ಕರಿಸಿ ಅವರ ದೈನಂದಿನ ಕೆಲಸ ಕಾರ್ಯಗಳಲ್ಲಿ ಸಹಾಯ ಮಾಡಿ. ಇದರಿಂದ ನಿಮ್ಮ ಮನಸ್ಸು ಕೂಡ ಉಲ್ಲಾಸಭರಿತವಾಗಿರುತ್ತದೆ. ಸಮಾಜದಲ್ಲಿ ಸಂಸ್ಕಾರಯುತ ಮನುಷ್ಯನಾಗಿ ಬಾಳಬೇಕಾದರೆ ಉತ್ತಮ ಸಂಸ್ಕಾರಗಳನ್ನು ಅಳವಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಮುಖ್ಯಶಿಕ್ಷಕ ವಿ.ಡಿ.ಜಾನ್ ಮಾತನಾಡಿ, ಮಕ್ಕಳಿಗೆ ಇಂತಹ ಮಾರ್ಗದರ್ಶನ ನೀಡುವಂತಹ ಕಾರ್ಯಕ್ರಮಗಳು ಅಗತ್ಯ. ಇಂತಹ ಕಾರ್ಯಕ್ರಮಗಳಿಂದ ಮಕ್ಕಳಿಗೆ ಪ್ರೌಢಾವಸ್ಥೆಯಲ್ಲಿಯೇ ಉಜ್ವಲ ಭವಿಷ್ಯಕ್ಕೆ ಬುನಾದಿ ಹಾಕಲು ಸಹಕಾರವಾಗುತ್ತದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಇಂತಹ ಕಾರ್ಯಗಳು ನಿಜಕ್ಕೂ ಶ್ಲಾಘನೀಯ ಎಂದರು.
ಮಕ್ಕಳಿಗಾಗಿ ಮೊಬೈಲ್ ಬಳಕೆ ಉಪಯೋಗ ಹಾಗೂ ದುಷ್ಪರಿಣಾಮಗಳ ಬಗ್ಗೆ ಪ್ರಬಂಧ ಸ್ಪರ್ಧೆ ನಡೆಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಾಲೆಯ ದೈಹಿಕ ಶಿಕ್ಷಕಿ ಕೆ.ಜೆ.ಜಾನ್ಸಿ, ಶಿಕ್ಷಕರಾದ ಎಂ.ಜೆ.ಜಾನ್ಸಿ, ದೇವಸಿ, ಜೋಸ್, ಜಗದೀಶ್, ಸತೀಶ್, ಶೆಟ್ಟಿಕೊಪ್ಪ ವೃತ್ತದ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ಸತೀಶ್, ಜಗದೀಶ್, ದೇವಸಿ ಇದ್ದರು.