ಜಿಲ್ಲೆ

ಓಟ ನಿಲ್ಲಿಸಿದ ರಾಣೆಬೆನ್ನೂರ ಹುಲಿ

ರಾಣೆಬೆನ್ನೂರ: ‘ರಾಣೆಬೆನ್ನೂರ ಹುಲಿ’ ರಾಜ್ಯ, ಹೊರ ರಾಜ್ಯದಲ್ಲೂ ಫೇಮಸ್. ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆಗೆ ರಾಣೆಬೆನ್ನೂರ ಹುಲಿ(ಹೋರಿ) ಎಂಟ್ರಿ ಕೊಟ್ಟಿದೆ ಎಂದರೆ ಅಖಾಡ ರಂಗೇರುತ್ತಿತ್ತು. 1.10 ಕೋಟಿ ರೂ., 5 ಎಕರೆ ಜಮೀನು ಕೊಡುತ್ತೇವೆ ಎಂದರೂ ಮಾಲೀಕ ಹೋರಿ ಮಾರಾಟ ಮಾಡಿರಲಿಲ್ಲ. 25 ತೊಲ ಬಂಗಾರ, 1 ಕೆ.ಜಿ. ಬೆಳ್ಳಿ, 17 ಬೈಕ್ ಹೀಗೆ ಹತ್ತು ಹಲವು ಬಹುಮಾನಗಳು ಹೋರಿಯ ಮುಡಿಗೇರಿದ್ದವು. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ‘ರಾಣೆಬೆನ್ನೂರ ಹುಲಿ’ ಇದೀಗ ಮರಳಿ ಬಾರದ ಲೋಕಕ್ಕೆ ಪಯಣಿಸಿದೆ.

ಹೋರಿಯ ಮಾಲೀಕ ದೆವ್ವ ಮರಿಯಪ್ಪ ಹಾಗೂ ಕುಟುಂಬಸ್ಥರು ಸೋಮವಾರ ಹೋರಿಯ ಮೃತದೇಹವನ್ನು ನಗರದಲ್ಲೆಡೆ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿದರು. ಕೊನೆಗೆ ತಮ್ಮ ಜಮೀನಿನಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದರು. ಹೋರಿ ಅಗಲಿಕೆಯಿಂದ ಕುಟುಂಬಸ್ಥರ ಹಾಗೂ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತ್ತು.

ರಾಣೆಬೆನ್ನೂರ ಹುಲಿ ಎಂದೇ ಹೆಸರು: ಇಲ್ಲಿಯ ಕುರುಬಗೇರಿಯ ನಿವಾಸಿ ದೆವ್ವ ಮರಿಯಪ್ಪ ಕಳೆದ 10 ವರ್ಷದ ಹಿಂದೆ ತಮಿಳನಾಡಿನ ಮೈಕ್ ಮಂಜು ಎಂಬುವರಿಂದ 62 ಸಾವಿರ ರೂ. ಕೊಟ್ಟು ಹೋರಿ ತಂದಿದ್ದರು. ಅದಕ್ಕೆ ಹಾಲು, ಸೇಬುಹಣ್ಣು, ಮೊಟ್ಟೆ ಸೇರಿ ಬಗೆ ಬಗೆಯ ಆಹಾರ ನೀಡಿ ತಮ್ಮ ಮನೆಯ ಮಗನಂತೆ ಬೆಳೆಸಿದ್ದರು.

ರಾಜ್ಯದ ಯಾವುದೇ ಮೂಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ನಡೆದರೂ ಅಲ್ಲಿ ದೆವ್ವ ಮರಿಯಪ್ಪ ಅವರ ಹೋರಿ ಪ್ರಥಮ ಸ್ಥಾನಗಳಿಸುತ್ತಿತ್ತು. ಹೀಗಾಗಿ ಅದಕ್ಕೆ ‘ರಾಣೆಬೆನ್ನೂರ ಹುಲಿ’ ಎಂದು ನಾಮಕರಣ ಮಾಡಿದ್ದರು. ಸ್ಪರ್ಧೆಯಲ್ಲಿ ರಾಣೆಬೆನ್ನೂರ ಹುಲಿ ನೋಡುವುದಕ್ಕಾಗಿಯೇ ಸಾವಿರಾರು ಜನ ಸೇರುತ್ತಿದ್ದರು. ಅಲ್ಲದೆ, ರಾಣೆಬೆನ್ನೂರ ಹುಲಿ ಬಂದಿದೆ ಎಂದರೆ ಸಾಕು ಇತರರು ತಮ್ಮ ಹೋರಿಗಳನ್ನು ಸ್ಪರ್ಧೆಗೆ ಬಿಡಲು ಅಂಜುತ್ತಿದ್ದರು. ರಾಣೆಬೆನ್ನೂರ ಹುಲಿಯ ಓಟಕ್ಕೆ ಮನಸೋತು ಲಕ್ಷಾಂತರ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ.

ಹೊರ ರಾಜ್ಯದವರಿಂದಲೂ ಅಂತಿಮ ನಮನ: ಭಾನುವಾರ ಮಧ್ಯರಾತ್ರಿಯೇ ಹೋರಿ ಅನಾರೋಗ್ಯದಿಂದ ಮೃತಪಟ್ಟಿತ್ತು. ಹೋರಿಯ ಅಂತಿಮ ದರ್ಶನಕ್ಕೆ ಮರಿಯಪ್ಪ ಅವರ ಮನೆ ಮುಂಭಾಗದಲ್ಲಿಯೇ ವ್ಯವಸ್ಥೆ ಮಾಡಲಾಗಿತ್ತು. ತಮಿಳನಾಡು, ಹಾವೇರಿ, ದಾವಣಗೆರೆ, ಶಿವಮೊಗ್ಗ ಇತರೆಡೆಯ ಅಭಿಮಾನಿಗಳು ಆಗಮಿಸಿ ಹೋರಿಯ ಶರೀರಕ್ಕೆ ಹೂಮಾಲೆ ಹಾಕಿ, ಪೂಜೆ ಮಾಡಿ ಅಂತಿಮ ದರ್ಶನ ಪಡೆದರು. ನೆರೆದಿದ್ದ ಬಹುತೇಕರ ಕಣ್ಣಾಲಿಗಳು ತೇವಗೊಂಡಿದ್ದವು.

ಗೆಲುವಿನ ಆರಂಭ: ರಾಣೆಬೆನ್ನೂರ ಹುಲಿ 10 ವರ್ಷದಿಂದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗವಹಿಸಿದೆ. ಮೊದಲನೇ ಸ್ಪರ್ಧೆಯಿಂದ ಹಿಡಿದು ಈವರೆಗೂ ಸೋತ ಉದಾಹರಣೆಯೇ ಇಲ್ಲ. 10 ವರ್ಷದಲ್ಲಿ 25 ತೊಲ ಬಂಗಾರ, 1 ಕೆ.ಜಿ. ಬೆಳ್ಳಿ, 17 ಬೈಕ್, 25 ಗಾಡ್ರೇಜ್, 10 ಫ್ರೀಜ್, 10 ಟಿವಿ, 2 ಎತ್ತಿನ ಚಕ್ಕಡಿ, 2 ಎತ್ತಿನ ಬಂಡಿ ಸೇರಿ ನಾನಾ ಬಗೆಯ ಬಹುಮಾನಗಳನ್ನು ಮುಡಿಗೇರಿಸಿಕೊಂಡಿದೆ.

ಕೋಟಿ ಕೊಟ್ಟರೂ ಕೊಟ್ಟಿರಲಿಲ್ಲ : ರಾಣೆಬೆನ್ನೂರ ಹುಲಿ ಖರೀದಿಗೆ 1.10 ಕೋಟಿ ರೂ. ಹಾಗೂ 5 ಎಕರೆ ಜಮೀನು ಕೊಡುವುದಾಗಿ ತಮಿಳುನಾಡಿನ ಅಭಿಮಾನಿಯೊಬ್ಬರು ದೆವ್ವ ಮರಿಯಪ್ಪ ಅವರ ಬಳಿ ಪ್ರಸ್ತಾಪ ಇಟ್ಟಿದ್ದರಂತೆ. ಆದರೆ, ‘ಯಾವ ಕಾರಣಕ್ಕೂ ನನ್ನ ಹುಲಿಯನ್ನ ಕೊಡುವುದಿಲ್ಲ ಎಂದು ವಾಪಸ್ ಕಳುಹಿಸಿದ್ದೇನೆ. ಅಷ್ಟೊಂದು ಹೋರಿಯ ಮೇಲೆ ನಮ್ಮ ಕುಟುಂಬಸ್ಥರು ಜೀವ ಇಟ್ಟುಕೊಂಡಿದ್ದೇವು’ ಎಂದು ದೆವ್ವ ಮರಿಯಪ್ಪ ಕಣ್ಣೀರಿಡುತ್ತ ವಿಜಯವಾಣಿ ಎದುರು ಅಭಿಪ್ರಾಯ ಹಂಚಿಕೊಂಡರು.

ಸಾವಿಗೆ ಕಾರಣವಾಯಿತೇ ಸೊರಬದ ಸೋಲು?: ಕಳೆದ ನಾಲ್ಕು ದಿನದ ಹಿಂದೆ ಸೊರಬ ತಾಲೂಕಿನ ಚಿಕ್ಕಚೌಟಿ ಗ್ರಾಮದಲ್ಲಿ ಏರ್ಪಡಿಸಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ರಾಣೆಬೆನ್ನೂರ ಹುಲಿ ಕೊಂಚ ಕಾಲು ಜಾರಿ ಬಿದ್ದು ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಸೋಲು ಕಂಡಿತ್ತು. ಅಂದು ಮನೆಗೆ ವಾಪಸ್ ಬಂದಿದ್ದ ಹೋರಿ ಸರಿಯಾಗಿ ಆಹಾರ ಸೇವಿಸಿರಲಿಲ್ಲ. ಯಾರ ಕಡೆ ತಿರುಗಿಯೂ ನೋಡುತ್ತಿರಲಿಲ್ಲ. ಸ್ವಲ್ಪ ಜ್ವರ ಕೂಡ ಬಂದಿದ್ದವು. ವೈದ್ಯರಿಗೆ ತೋರಿಸಿ ಚಿಕಿತ್ಸೆ ಸಹ ಕೊಡಿಸಿದ್ದೆವು. ಆದರೆ, ಭಾನುವಾರ ಮಧ್ಯರಾತ್ರಿ ಏಕಾಏಕಿ ಪ್ರಾಣ ಬಿಟ್ಟಿದೆ ಎಂದು ಹೋರಿ ಮಾಲೀಕ ಮರಿಯಪ್ಪ ತಿಳಿಸಿದರು.

ಎಲ್ಲಿಯಾದರೂ ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆ ಇದೆ ಎಂದರೆ ಅಭಿಮಾನಿಗಳು ಫೋನ್ ಮಾಡಿ ರಾಣೆಬೆನ್ನೂರ ಹುಲಿ ಬರುತ್ತೋ, ಇಲ್ಲವೋ ಎಂದು ಕೇಳುತ್ತಿದ್ದರು. ಹುಲಿ ಬಂದಿಲ್ಲ ಎಂದರೆ ನಾವು ಬರಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದರು. ಹೀಗಾಗಿ ಎಲ್ಲೇ ಸ್ಪರ್ಧೆ ನಡೆದರೂ ನಮ್ಮ ಹೋರಿ ಪ್ರಥಮ ಸ್ಥಾನದಲ್ಲಿ ಗೆದ್ದು ಬರುತ್ತಿತ್ತು. | ದೆವ್ವ ಮರಿಯಪ್ಪ ಹೋರಿ ಮಾಲೀಕ