ಚಿತ್ರದುರ್ಗ: ಶ್ರಾವಣ ಮಾಸದಲ್ಲೇ ಸಮುದ್ರ ಮಂಥನ ನಡೆದಿತ್ತು. ಈ ವೇಳೆ ಲೋಕ ಕಲ್ಯಾಣಾರ್ಥ ಮಹಾದೇವ ಹಾಲಾಹಲ ಸೇವಿಸಿದ್ದನು. ಹೀಗಾಗಿ ನೀಲಕಂಠನಿಗೆ ಅತ್ಯಂತ ಪ್ರಿಯಕರ ಮಾಸವಾಗಿದ್ದು, ಭಕ್ತರು ಬೇಡಿದ್ದನ್ನು ಕರುಣಿಸುತ್ತಾನೆಂಬ ನಂಬಿಕೆ ಹಿಂದು ಧರ್ಮೀಯರಲ್ಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಬಹುತೇಕ ಶಿವಾಲಯಗಳು ಆರಾಧನೆಗಾಗಿ ಸೋಮವಾರ ಕಳೆಗಟ್ಟಿದ್ದವು.
ಶಂಕರ, ಶಶಿಧರ ಸೇರಿ ನಾನಾ ಹೆಸರುಗಳಿಂದ ಕರೆಸಿಕೊಳ್ಳುವ ಶಿವನಿಗೆ ಮಹಾರುದ್ರಾಭಿಷೇಕ ಸೇರಿ ಇತರೆ ಪೂಜೆಗಳು ನಗರ ಸೇರಿ ಜಿಲ್ಲೆಯ ಹಲವೆಡೆ ಮಾಸದ ಎರಡನೇ ಸೋಮವಾರ ಶಾಸ್ತ್ರೋಕ್ತವಾಗಿ ನೆರವೇರಿದವು. ಸಾವಿರಾರು ಭಕ್ತರು ಭಕ್ತಿ-ಭಾವದಲ್ಲಿ ಮಿಂದೆದ್ದರು. ದೇಗುಲಗಳಲ್ಲಿ ಹರ ಹರ ಮಹಾದೇವ್ ಜಯಘೋಷಗಳು ಮೊಳಗಿದವು.
ನಗರದ ನೀಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಮುಂಜಾನೆಯಿಂದಲೇ ಪೂಜೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ರುದ್ರಾಭಿಷೇಕದ ಬಳಿಕ ಸ್ವಾಮಿಯ ಬೆಳ್ಳಿ ಮೂರ್ತಿಯನ್ನು ಹಳದಿ, ಕೆಂಪು, ಬಿಳಿ ಸೇವಂತಿ, ಗುಲಾಬಿ, ಬಟನ್ಸ್, ಬಿಲ್ವಪತ್ರೆ, ಆಕರ್ಷಕ ಪುಷ್ಪ ಹಾಗೂ ಹಾರಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.
ಭಕ್ತಿಯ ಪರಕಾಷ್ಠೆ: ಐತಿಹಾಸಿಕ ದೇಗುಲಗಳಾದ ಹಿಡಂಭೇಶ್ವರ, ಸಂಪಿಗೆ ಸಿದ್ಧೇಶ್ವರ, ಕಾಶಿ ವಿಶ್ವೇಶ್ವರ, ಪಲ್ಗುಣೇಶ್ವರ, ಕರ್ವತೀಶ್ವರ, ನಗರದಲ್ಲಿನ ಗಾರೆಬಾಗಿಲು ಈಶ್ವರ, ಉಮಾ ಮಹೇಶ್ವರ, ದೊಡ್ಡಪೇಟೆ ಕಂಬಳಿ ಬೀದಿಯ ಬೀರಗಲ್ಲೇಶ್ವರ, ನಗರೇಶ್ವರ, ಗಾರೇಹಟ್ಟಿಯ ಮಹಾಬಲೇಶ್ವರ, ಶ್ರೀಶೈಲ ಭ್ರಮರಾಂಬಿಕಾ ಮಲ್ಲಿಕಾರ್ಜುನ, ಪಾತಾಳೇಶ್ವರ ಸೇರಿ ಜಿಲ್ಲೆಯ ಶಿವ ದೇಗುಲಗಳಲ್ಲಿ ಸ್ವಾಮಿಯ ಮೂರ್ತಿಗೆ ಜಲಾಭಿಷೇಕ, ಬಿಲ್ವಾರ್ಚನೆ, ಮಹಾರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಪುಷ್ಪಾರ್ಚನೆ ಸೇವೆಗಳು ಜರುಗಿದವು.
ಭಕ್ತರು ಹಣ್ಣು, ಕಾಯಿ, ಹೂವು ಸೇರಿ ಪೂಜಾ ಸಾಮಗ್ರಿಗಳೊಂದಿಗೆ ದೇಗುಲಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದರು. ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಕೆಲವೆಡೆ ಸಮೃದ್ಧ ಮಳೆ-ಬೆಳೆಗಾಗಿಯೂ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರಿಗೆ ತೀರ್ಥ, ಮಹಾಮಂಗಳಾರತಿ, ಪ್ರಸಾದ ವಿತರಿಸಲಾಯಿತು.
ಮಹಾರುದ್ರನ ಆರಾಧಕರಿಗೆ ಸೋಮವಾರ ಅತ್ಯಂತ ಶ್ರೇಷ್ಠ ದಿನವಾದ್ದರಿಂದ ಶ್ರಾವಣ ಮಾಸದ ಎಲ್ಲ ಸೋಮವಾರದಂದು ವಿಶೇಷ ಪೂಜೆ ನೆರವೇರಿಸಲು ಶಿವಾಲಯಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.