ವಿಜಯವಾಣಿ ಸುದ್ದಿಜಾಲ ಧಾರವಾಡ
ಇಂದು ವಿದ್ಯಾರ್ಥಿಗಳಲ್ಲಿ ನೈತಿಕ ಮಟ್ಟ ಕುಸಿಯುತ್ತಿರುವುದು ವಿಷಾದನೀಯ. ಪ್ರತಿಯೊಬ್ಬರ ಬದುಕಿನಲ್ಲಿ ಪಿಯುಸಿ ಹಂತ ನಿರ್ಣಾಯಕ. ಇದರ ಮಹತ್ವ ಅರಿತು ಶ್ರದ್ಧೆಯಿಂದ ಅಧ್ಯಯನ ನಡೆಸಿ ಒಳ್ಳೆ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ವೈದ್ಯ ಡಾ. ಎಸ್. ಆರ್. ರಾಮನಗೌಡರ ಹೇಳಿದರು.
ನಗರದ ಸೃಜನಾ ರಂಗ ಮಂದಿರದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಹಿರೇಮಲ್ಲೂರ ಈಶ್ವರನ್ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ 2023-24ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಚಾಲನೆ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಬಸವರಾಜ ಹೂಗಾರ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಶ್ರೀ ಅಲ್ಲಮಪ್ರಭು ಸ್ವಾಮೀಜಿ ಆಶೀರ್ವಚನ ನೀಡಿ, ಕಡಿಮೆ ಅಂಕಗಳಿಸಿದ ಮತ್ತು ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿ ಅವರ ಸರ್ವತೋಮುಖ ವಿಕಾಸಕ್ಕೆ ಹಗಲಿರುಳು ಶ್ರಮಿಸುತ್ತಿರುವ ಕಾಲೇಜಿನ ಕಾರ್ಯ ಪ್ರಶಂಸನೀಯ. ಕಾಲೇಜಿನಲ್ಲಿ ಶಿಕ್ಷಣದ ಜತೆಗೆ ಸಂಸ್ಕಾರ ನೀಡುತ್ತಿದ್ದು, ಇಲ್ಲಿ ಕಲಿಯುತ್ತಿರುವ ಮಕ್ಕಳು ಅದೃಷ್ಟವಂತರು ಎಂದರು.
ಕಾಲೇಜಿನ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಚಾರ್ಯ ಶಶಿಧರ ತೋಡಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಎಸ್.ಎಸ್. ಪಾಟೀಲ, ನಿಂಗಣ್ಣ ಕುಂಟಿ, ಎಂ.ಎಂ. ಚಿಕ್ಕಮಠ, ಜಿ.ಕೆ. ಹೆಗಡೆ, ಮಾರುತಿ ಬಾಣದ, ಜಿ.ಎ. ಕಲ್ಲೂರ,ಆನಂದ ಗೊಣ್ಣಾಗರ, ಮಧ್ವೇಶ ಗುಡಿ, ಅರವಿಂದ ಕಪಲಿ, ಶಾಂತರಾಜ ವಿಭೂತಿ, ಉಪನ್ಯಾಸಕರು, ವಿದ್ಯಾರ್ಥಿಗಳು, ಇತರರು ಇದ್ದರು.
ನೀಲಮ್ಮ ಕೋಟಿ ಸ್ವಾಗತಿಸಿದರು. ಡಾ. ಈರಣ್ಣ ಇಂಜಗನೇರಿ ನಿರೂಪಿಸಿದರು. ಗೌರಿ ಶೆಟ್ಟಿ ವಂದಿಸಿದರು.