ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿಕೆ ಮುಖ್ಯ ಎಂದು ಮಿತ್ರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಮಹೇಶ ಪಾಟೀಲ ಹೇಳಿದರು.
ನಗರದ ಪವನ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಪಠ್ಯ ಚಟುವಟಿಕೆಗಳಿಗೆ ಹೆಚ್ಚಿನ ಮಹತ್ವ ನೀಡಬೇಕು. ಇದರಿಂದ ಆತ್ಮವಿಶ್ವಾಸ ಬೆಳೆದು ಶೈಕ್ಷಣಿಕ ರಂಗದಲ್ಲಿ ಉನ್ನತ ಸಾಧನೆ ಮಾಡಿ ಒಳ್ಳೆ ನಾಗರಿಕರಾಗಲು ಸಾಧ್ಯ ಎಂದರು.
ಪಾರ್ವತಿ ಕಳಸಣ್ಣವರ್ ಮಾತನಾಡಿ, ಮಕ್ಕಳ ಶೈಕ್ಷಣಿಕ, ಸಾಮಾಜಿಕ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರದ ಜತೆಗೆ ಪಾಲಕರ ಪಾತ್ರವು ಮಹತ್ವದ್ದಾಗಿದೆ. ಪ್ರಸ್ತುತ ಸಮಾಜದಲ್ಲಿ ಮಕ್ಕಳು ದಾರಿ ತಪ್ಪದಂತೆ ಸರಿಯಾದ ಮಾರ್ಗದಲ್ಲಿ ನಡೆಯುವ ಬಗ್ಗೆ ಹೆಚ್ಚು ಗಮನ ನೀಡಬೇಕು ಎಂದರು.
ಮಿತ್ರ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷೆ ರತ್ನಾ ಪಾಟೀಲ, ರೆಡ್ಡಿ ಶೇಖರ, ರೂಪೇಶಕುಮಾರ, ಅಕ್ಷತಾ ಪಾಟೀಲ, ಪ್ರಾಚಾರ್ಯ ವಿಕ್ರಮ ಮಹಾಶಬ್ದೆ, ಪ್ರವೀಣ ಬ್ಯಾಹಟ್ಟಿ, ಸವಿತಾ ಕಂಬಿ, ಶಾಲಾ ಸಂಸತ್ ಪ್ರಧಾನಮಂತ್ರಿ ಸಾನಿಕಾ ಪೂಜಾರ, ಶ್ರೇಯಾ ಕಬಾಡಗಿ, ಇತರರು ಇದ್ದರು.
ನಂತರ ಶಾಲೆ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ಸಾನಿಯಾ ಇನಾಮದಾರ ಹಾಗೂ ಮೇದಿನಿ ಎಚ್. ನಿರೂಪಿಸಿದರು. ಸುಧನ್ವ ವಂದಿಸಿದರು.