ಬಾಳೆಹೊನ್ನೂರು: ನಮ್ಮ ಒಳ್ಳೆಯ ನಡತೆಯನ್ನು ಜಗತ್ತು ನೋಡುತ್ತಿರುತ್ತದೆ. ದ್ವೇಷ, ಅಸೂಯೆ ಇರಬಾರದು. ಆಗ ಮಾತ್ರ ನಮಗೆ ದೇವರ ದರ್ಶನವಾಗಲಿದೆ ಎಂದು ಗೌರಿಗದ್ದೆ ದತ್ತಾವದೂತ ವಿನಯ್ ಗುರೂಜಿ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಖಾಂಡ್ಯ ವಲಯದಿಂದ ಖಾಂಡ್ಯ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಭಾನುವಾರ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೆಣ್ಣು ಸಂಸ್ಕಾರ ಹೊಂದಿದರೆ ಮನೆ ಬೆಳಗಲಿದ್ದು, ಹೆಣ್ಣಿಗೆ ಅಗತ್ಯವಿರುವ ಸಂಸ್ಕಾರ ತಂದೆ, ತಾಯಿ, ದೇವಸ್ಥಾನ ಹಾಗೂ ಸನ್ಯಾಸಿಗಳ ಪ್ರವಚನದಿಂದ ದೊರೆಯಲಿದೆ. ಒಳ್ಳೆಯದನ್ನು ಬಯಸುವುದೇ ನಿಜವಾದ ಧರ್ಮ. ಮಕ್ಕಳಿಗೆ ಸಂಸ್ಕಾರ ನೀಡಬೇಕು. ಹಣ ನೀಡಿದರೆ ಪ್ರಯೋಜನವಿಲ್ಲ. ಮಕ್ಕಳಿಗೆ ಸಂಸ್ಕಾರ ಶಾಲೆಗಳಿಂದ ದೊರೆಯಲ್ಲ. ಅದು ಮನೆ ಹಾಗೂ ಸಂಘಟನೆಗಳಿಂದ ದೊರೆಯಲಿದೆ ಎಂದರು.
ಜೀವನದಲ್ಲಿ ಆರೋಗ್ಯ, ಆದಾಯ, ಆಯುಷ್ಯ ಮುಖ್ಯ. ಈ ಮೂರೂ ಇದ್ದರೆ ಎಲ್ಲವೂ ದೊರೆಯಲಿದೆ. ಮಾತು, ಮನಸ್ಸು, ಕೃತಿ ಮೂರರಲ್ಲೂ ಸತ್ಯವಿರಬೇಕು. ಆಗ ಮಾತ್ರ ಜೀವನ ಸಾರ್ಥಕ್ಯ ಪಡೆಯಲಿದೆ ಎಂದರು.
ಧರ್ಮಸ್ಥಳ ಸಂಘ ಸಮಾಜದಲ್ಲಿ ಸಮಾನತೆ ತಂದಿದ್ದು, ಸರ್ಕಾರ ಮಾಡುವ ಕೆಲಸವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ. ಮಹಿಳೆಯರನ್ನು ಆರ್ಥಿಕ ಸಬಲೀಕರಣಗೊಳಿಸಿ ಸಮಾಜದ ಮುಖ್ಯವಾಹಿನಿಗೆ ತಂದಿದೆ. ದುಶ್ಚಟಗಳಿಗೆ ಒಳಗಾದವರನ್ನು ವ್ಯಸನಮುಕ್ತಗೊಳಿಸುವ ಕೆಲಸ ಮಾಡುತ್ತಿದೆ. ಅನಕ್ಷರಸ್ಥರಿಗೆ ಜ್ಞಾನ ದಾಸೋಹ ನೀಡುತ್ತಿದೆ. ಸಮಾಜದಲ್ಲಿ ಹಿಂದುಳಿದವರು ಮುಂದುವರಿದು ಬದುಕುವಂತೆ ಗ್ರಾಮಾಭಿವೃದ್ಧಿ ಯೋಜನೆ ಮಾಡಿದೆ ಎಂದು ಹೇಳಿದರು.
ಊರು ಬೆಳೆಯಲು ನಮ್ಮಲ್ಲಿ ಉತ್ತಮ ಚಿಂತನೆಗಳು ಬೆಳೆಯಬೇಕು. ಗ್ರಾಮೀಣ ಭಾಗದ ಜನರಲ್ಲಿ ಉತ್ತಮ ಚಿಂತನೆ ಬಿತ್ತಿರುವುದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. ಗ್ರಾಮಾಭಿವೃದ್ಧಿ ಯೋಜನೆಯಿಂದ ಹಲವಾರು ದೇವಸ್ಥಾನಗಳ ಅಭಿವೃದ್ಧಿಯಾಗಿದ್ದು, ಮುಂದಿನ ದಿನಗಳಲ್ಲಿ ಹಳ್ಳಿಗಳಲ್ಲಿ ಆಸ್ಪತ್ರೆಗಳು ಆರಂಭಗೊಳ್ಳುವ ನಿರೀಕ್ಷೆಯಿದೆ ಎಂದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಶೃಂಗೇರಿ ಕ್ಷೇತ್ರಾದ್ಯಂತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತ ಈ ಭಾಗದ ಜನರ ಮನದಲ್ಲಿ ಶಾಶ್ವತವಾಗಿ ನೆಲೆಯೂರಿದೆ. ಸರ್ಕಾರ ಮಾಡುವ ವಿವಿಧ ಸಾಮಾಜಿಕ ಕೆಲಸ ಕಾರ್ಯಗಳನ್ನು ಗ್ರಾಮಾಭಿವೃದ್ಧಿ ಯೋಜನೆ ಸ್ವಯಂ ಪ್ರೇರಣೆಯಿಂದ ನಡೆಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಬಿ.ಸಿ.ಗುರುಮೂರ್ತಿ, ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ, ಖಾಂಡ್ಯ ಮಾರ್ಕಾಂಡೇಶ್ವರ ದೇವಸ್ಥಾನದ ವ್ಯವಸ್ಥಾಪಕ ಎಸ್.ವಿ.ಮಂಜುನಾಥ್, ದೇವದಾನ ಗ್ರಾಪಂ ಅಧ್ಯಕ್ಷ ಕೆ.ಜಿ.ಸಂಪತ್, ಯೋಜನಾಧಿಕಾರಿ ಸುರೇಶ್, ಖಾಂಡ್ಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಮಾಸ್ಟರ್ ಚಂದ್ರಶೇಖರ್ ರೈ ಇತರರಿದ್ದರು.