ಜಿಲ್ಲೆ

ಒಳಮೀಸಲು ಸಮಗ್ರ ಸಮೀಕ್ಷೆ ಕೈಗೊಳ್ಳಿ

ಚಿತ್ರದುರ್ಗ: ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣ ಆಗಬೇಕಿದೆ. ಆದರೆ, ಈ ಸಂಬಂಧ ವಾಸ್ತವಿಕ ದತ್ತಾಂಶಗಳು ಸದ್ಯ ಸರ್ಕಾರದ ಬಳಿ ಲಭ್ಯವಿಲ್ಲ. ಹೀಗಾಗಿ ಪರಿಶಿಷ್ಟ ಜಾತಿ ಒಳಮೀಸಲಾತಿ ಆಯೋಗ ಹೊಸದಾಗಿ ಸಮಗ್ರ ಸಮೀಕ್ಷೆ ಕೈಗೊಳ್ಳಬೇಕು ಎಂದು ಭೋವಿ ಸಮುದಾಯದ ನಿಯೋಗ ಆಯೋಗದ ಅಧ್ಯಕ್ಷ ನ್ಯಾ. ನಾಗಮೋಹನದಾಸ್ ಅವರನ್ನು ಒತ್ತಾಯಿಸಿದೆ.

ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಸಮುದಾಯದವರು ಮಂಗಳವಾರ ಬೆಂಗಳೂರಿನಲ್ಲಿ ಅಧ್ಯಕ್ಷರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಎಸ್ಸಿ ಮೀಸಲು ವರ್ಗೀಕರಣ ಮಾಡುವ ಮುನ್ನ ಸಮುದಾಯಗಳ ಅಂತರ್ ಹಿಂದುಳಿದಿರುವಿಕೆ ಪತ್ತೆ ಹಚ್ಚಬೇಕು. ಅದಕ್ಕಾಗಿ ಎಂಪಿರಿಕಲ್ ಡೇಟಾ ಅಗತ್ಯವಿದೆ. ಸರ್ವೋಚ್ಚ ನ್ಯಾಯಾಲಯ ಕೂಡ ತೀರ್ಪಿನಲ್ಲಿ ಇದನ್ನು ಉಲ್ಲೇಖಿಸಿದೆ. ಈ ಹಿನ್ನೆಲೆಯಲ್ಲಿ ಆಯೋಗ ಕಾರ್ಯನಿರ್ವಹಿಸುವ ಭರವಸೆ ನೀಡಿದೆ. ಸಾಧ್ಯವಾಗದಿದ್ದಲ್ಲಿ ಈಗಾಗಲೇ ಕೇಂದ್ರ ಸರ್ಕಾರ ಆರಂಭಿಸಿರುವ ರಾಷ್ಟ್ರೀಯ ಜನಗಣತಿ ಪೂರ್ಣಗೊಂಡ ಬಳಿಕ ಸಿಗುವ ಮಾಹಿತಿಗಾಗಿ ಕಾಯಬೇಕು ಎಂದು ಒತ್ತಾಯಿಸಿದರು.

ಎಲ್ಲ ಪರಿಶಿಷ್ಟ ಸಮುದಾಯಗಳ ಕುಲಶಾಸ್ತ್ರ ಅಧ್ಯಯನ ನಡೆಸಬೇಕು. ಸಾರ್ವಜನಿಕ ಅಹವಾಲು ಸ್ವೀಕರಿಸಲು ಆಯೋಗವು ನಿಗದಿಪಡಿಸಿರುವ ದಿನಾಂಕವನ್ನು ಇನ್ನೂ ಕನಿಷ್ಟ ಮೂರು ತಿಂಗಳಿಗೆ ವಿಸ್ತರಿಸಬೇಕು. ಅದಕ್ಕಾಗಿ ಅಧ್ಯಯನ ನಡೆಸಲು ಪ್ರತಿ ಜಿಲ್ಲೆಯ ಪ್ರವಾಸ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸುಪ್ರೀಂಕೋರ್ಟ್ ತೀರ್ಪಿನಂತೆ ಎಂಪಿರಿಕಲ್ ಡೇಟಾ ನಿಖರವಾಗಿ ಯಾವುದೆಂಬುದನ್ನು ಸ್ಪಷ್ಟಪಡಿಸಲು ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮಾಹಿತಿ ಪಡೆಯಬೇಕು. ಈ ಸಮುದಾಯಗಳ ಸ್ಥಿತಿಗತಿಗಳ ಅಂಕಿ-ಅಂಶಗಳು ಹೊರಬರುವವರೆಗೂ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು. ಯಾವ ಕಾರಣಕ್ಕೂ ಆತುರದ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಕೋರಿದರು.

ನಿಯೋಗದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ, ಕೋಲಾರ ಸಂಸದ ಮಲ್ಲೇಶಬಾಬು, ನಿವೃತ್ತ ನ್ಯಾಯಾಧೀಶ ವೆಂಕಟೇಶ, ಮುಖಂಡರಾದ ಆನಂದಪ್ಪ, ರವಿ ಪೂಜಾರ, ಮುನಿ ಮಾರಪ್ಪ, ಜಯರಾಮ, ಲಯನ್ ಶ್ರೀಧರ, ಜಯಶಂಕರ, ಓಂಕಾರ, ಪುರುಷೋತ್ತಮ, ಕಾಶಿ, ಗೀತಮ್ಮ, ಮಂಜುಳಮ್ಮ, ಡಾ. ನಿರ್ಮಲಮ್ಮ, ದೀಪಾ, ಚಂದ್ರಶೇಖರ ಇತರರಿದ್ದರು.