ಚಿತ್ರದುರ್ಗ: ಒಳಮೀಸಲಾತಿ ಸಂಬಂಧ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿರುವ ವರದಿ ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ, ಉಗ್ರ ಹೋರಾಟಕ್ಕೂ ಸಮುದಾಯ ಸಿದ್ಧ ಎಂದು ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಎಚ್ಚರಿಸಿದರು.
ಬಂಜಾರ ಲಂಬಾಣಿ ಸಮಾಜ, ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆಯಿಂದ ಬಂಜಾರ ಭವನದಲ್ಲಿ ಶುಕ್ರವಾರ ನಡೆದ ಸಂತ ಸೇವಾಲಾಲ್ ಮಹಾರಾಜರ 285ನೇ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಒಳಮೀಸಲಾತಿ ವರ್ಗೀಕರಣದಿಂದ ಕೊರಚ, ಕೊರಮ, ಲಂಬಾಣಿ, ಭೋವಿ ಸಮುದಾಯಕ್ಕೆ ಅನ್ಯಾಯವಾಗಲಿದೆ. ಹೀಗಾಗಿ ಶಿಫಾರಸು ಮಾಡಿರುವ ವರದಿ ಹಿಂಪಡೆಯಲೇಬೇಕು. 3,600 ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಸರ್ಕಾರ ಘೋಷಿಸಿ, ಮೂಲಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಯಾರ ಮೇಲೂ ದೌರ್ಜನ್ಯ, ದಬ್ಬಾಳಿಕೆ ನಡೆಸದ ಪವಿತ್ರ ಸಮುದಾಯ ನಮ್ಮದು. ಡಾ.ಬಿ.ಆರ್.ಅಂಬೇಡ್ಕರ್ ನೀಡಿರುವ ಸಂವಿಧಾನದಿಂದ ಸ್ವಾಭಿಮಾನದಿಂದ ಬದುಕುತ್ತಿದ್ದೇವೆ ಎಂದರು.
ಸೇವಾಲಾಲ್ ಮಹಾರಾಜರು ಶಾಂತಿ, ಕೆಲವೊಮ್ಮೆ ಕ್ರಾಂತಿಕಾರರಾಗಿದ್ದರು. ಹೀಗಾಗಿ ಇವೆರಡರ ಸಂಕೇತ ನಮ್ಮದಾಗಿದೆ. ಅವರ ತತ್ವಾದರ್ಶದೊಂದಿಗೆ ಸಾಗುತ್ತಿದ್ದೇವೆ. ಧರ್ಮಕ್ಕೆ ದ್ರೋಹ ಯಾರೇ ಮಾಡಿದರು ಅದು ಅಪಚಾರ ಎಂದು ತಿಳಿಸಿದರು.
ಲಂಬಾಣಿ ಸಮಾಜದವರ ಮುಗ್ಧತೆ ಕೆಲವರು ದುರುಪಯೋಗ ಪಡಿಸಿಕೊಂಡು ಅನ್ಯ ಧರ್ಮೀಯರು ಪ್ರೀತಿಸುವ ನೆಪದಲ್ಲಿ ಮತಾಂತರ ಮಾಡುತ್ತಿದ್ದಾರೆ. ಅದನ್ನು ಎಂದಿಗೂ ಸಹಿಸುವುದಿಲ್ಲ. ಈ ಕುರಿತು ಪ್ರತಿ ತಾಂಡಾಗಳಿಗೆ ಹೋಗಿ ಜಾಗೃತಿ ಅಭಿಯಾನ ಕೈಗೊಳ್ಳುತ್ತೇವೆ ಎಂದರು.
ಲಂಬಾಣಿ ಸಮಾಜದ ಅಧ್ಯಕ್ಷ ಎಂ.ಸತೀಶ್‌ಕುಮಾರ್ ಮಾತನಾಡಿ, ಕೆಲವರು ಸಮಾಜದಲ್ಲಿ ಒಡಕು ಮೂಡಿಸುತ್ತಿದ್ದಾರೆ. ಛಿದ್ರವಾಗಲು ಬಿಡುವುದಿಲ್ಲ. ಸ್ವಾಮೀಜಿ ಅವರ ಮುಂದಾಳತ್ವದಲ್ಲಿ ರಾಜ್ಯಾದ್ಯಂತ ಸಂಚರಿಸಿ ಮತಾಂತರ ತಡೆಯಲು ಹೋರಾಡುತ್ತೇವೆ ಎಂದು ಹೇಳಿದರು.
ತಾಂಡ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಗಿರೀಶ್ ಚಂದ್ಯಾನಾಯ್ಕಾ ಮಾತನಾಡಿ, ಸೇವಾಲಾಲ್ ಮಹಾರಾಜರು ಸಮುದಾಯ ಮೇಲೆತ್ತಲು ಶ್ರಮಿಸಿದ್ದಾರೆ. ಸಂಘಟನಾ ಚತುರ, ಸಮಾಜ ಸುಧಾರಕರಾಗಿದ್ದರು. ಹೀಗಾಗಿ ಭಿನ್ನಾಭಿಪ್ರಾಯ ಬದಿಗಿಟ್ಟು ಎಲ್ಲರೂ ಒಗ್ಗಟ್ಟಾಗಿ ಸೌಲಭ್ಯ ಪಡೆಯೋಣ ಎಂದು ಸಲಹೆ ನೀಡಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಸುಬ್ರನಾಯ್ಕ ಮಾತನಾಡಿ, ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ. ಆಗ ಮಾತ್ರ ಸಮಾಜ ಏಳ್ಗೆಯಾಗಲು ಸಾಧ್ಯ. ಬಡತನ ಕಾರಣಕ್ಕೆ ವಿದ್ಯೆ ಮೊಟಕುಗೊಳಿಸಿದರೆ ಪ್ರಯೋಜನವಿಲ್ಲ ಎಂದು ಸಲಹೆ ನೀಡಿದರು.
ಕ್ರೀಡಾ ಇಲಾಖೆ ಸದಸ್ಯ ಎಂ.ಲೋಕೇಶ್ವರ್ ನಾಯ್ಕ ಮಾತನಾಡಿ, ನಮ್ಮ ಸಮಾಜದಲ್ಲಿ ಅನೇಕ ಪ್ರತಿಭಾವಂತರಿದ್ದಾರೆ. ಅಂತವರನ್ನು ಗುರುತಿಸಿ, ಬೆಳಕಿಗೆ ತರುವ ಕೆಲಸವಾಗಬೇಕು ಎಂದರು.
ಮುಖಂಡರಾದ ಅನಂತಮೂರ್ತಿ ನಾಯ್ಕ, ಎ.ಜಾಕೀರ್‌ಹುಸೇನ್, ರುದ್ರಾಕ್ಷಿಬಾಯಿ, ರವಿಕುಮಾರ್ ನಾಯ್ಕ, ವೀರಭದ್ರನಾಯ್ಕ, ಎಲ್.ಪ್ರವೀಣ್, ಸಿದ್ದೇಶ್‌ನಾಯ್ಕ, ಶಿವಕುಮಾರ್‌ನಾಯ್ಕ, ಶಾಂತನಾಯ್ಕ ಇತರರಿದ್ದರು.