ಚಿತ್ರದುರ್ಗ: ಸಿಎಂ ಸಿದ್ದರಾಮಯ್ಯ ಅವರಿಗೆ ಬದ್ಧತೆ ಇಲ್ಲ. ಇದ್ದಿದ್ದರೆ ಒಳ ಮೀಸಲಾತಿಗಾಗಿ ಬೀದಿಗಿಳಿಯುವ ಅಗತ್ಯ ಬರುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಸ್ವಾಭಿಮಾನಿ ಮಾದಿಗ ಮಹಾಸಭಾ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಅವರು, ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ, ಬಾಬು ಜಗಜೀವನರಾಂ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು ನಂತರ ಸಿಎಂ ಹಾಗೂ ಕಾಂಗ್ರೆಸ್ ವಿರುದ್ಧ ಧಿಕ್ಕಾರ ಕೂಗಿದರು.
ಚಳ್ಳಕೆರೆ ಸೂರನಹಳ್ಳಿ ಶ್ರೀನಿವಾಸ್ ಮಾತನಾಡಿ, ಮಾದಿಗ ಸಮುದಾಯಕ್ಕೆ ಕಾಂಗ್ರೆಸ್ ತವರು ಮನೆಯಾಗಿದೆ. 70ವರ್ಷಗಳಿಂದ ಕಣ್ಣು ಮುಚ್ಚಿಕೊಂಡು ಆ ಪಕ್ಷಕ್ಕೆ ಮತ ನೀಡುತ್ತಾ ಬಂದಿದ್ದಾರೆ. ಆದರೆ, ಒಳ ಮೀಸಲಾತಿಗಾಗಿ ಆಪಕ್ಷದ ವಿರುದ್ಧವೇ ಹೋರಾಡುವ ನೋವಿನ ದಿನ ಇದಾಗಿದೆ. ಪಕ್ಷ ಸಮುದಾಯಕ್ಕೆ ನೀಡಿದ ಕೊಡುಗೆಯಾದರೂ ಏನು ಎಂದು ಪ್ರಶ್ನಿಸಿದರು.
ನಾನೇ ದಲಿತ ಎನ್ನುವ ಸಿಎಂ ಸಿದ್ದರಾಮಯ್ಯ ಅವರ ಬದ್ಧತೆ ಎಲ್ಲಿ ಹೋಗಿದೆ. ಮಾದಿಗರ ಸಿಟ್ಟು ರಟ್ಟೆಗೆ ಬಂದರೆ ಸರ್ಕಾರ ಪತನ ಆಗುವವರೆಗೂ ಹೋರಾಟ ನಿಲ್ಲದು ಎಂದು ಎಚ್ಚರಿಸಿದರು.
ಜಿ.ಎಚ್.ಮೋಹನ್‌ಕುಮಾರ್ ಮಾತನಾಡಿ, ಮೂರುವರೆ ದಶಕ ಕಾನೂನು ತೊಡಕೋ, ರಾಜಕಾರಣದ ಒಳ ಹೊಡೆತವೋ ಅರ್ಥವಾಗುತ್ತಿಲ್ಲ. ಸಚಿವ ಮುನಿಯಪ್ಪ ಅವರು ರಾಜೀನಾಮೆ ನೀಡಿ ಬಂದರೆ ಸಿಎಂ ಸಿದ್ದರಾಮಯ್ಯ ಕುರ್ಚಿ ಅಲ್ಲಾಡಲಿದೆ. ಅವರನ್ನೇ ಸಿಎಂ ಮಾಡಲು ಸಮುದಾಯ ಬೆನ್ನಿಗೆ ನಿಲ್ಲಲಿದೆ ಎಂದು ಹೇಳಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಒಳ ಮೀಸಲಾತಿ ಕುರಿತು ತುಟಿ ಬಿಚ್ಚುತ್ತಿಲ್ಲ. ಸಮುದಾಯದ ಪೂರ್ವಜರ ತ್ಯಾಗದಿಂದ ಅವರ ಸಮಾಧಿ ಮೇಲೆ ಅಧ್ಯಕ್ಷ ಸ್ಥಾನ ಲಭಿಸಿದೆ. ಆದರೆ, ಪಕ್ಷ ಮುಖ್ಯಮಂತ್ರಿ ಮಾಡಿದೆಯೇ ಎಂದು ಪ್ರಶ್ನಿಸಿದ ಅವರು, ಈಗಲೂ ಮಾದಿಗರನ್ನು ಮತದಾರರೆಂದೇ ಪರಿಗಣಿಸಿಲ್ಲ. ಮತ ಹಾಕುವ ಯಂತ್ರವೆಂದುಕೊಂಡಿದ್ದಾರೆ. ರಾಜಕೀಯ ನಾಯಕರು ಪಕ್ಷಾತೀತವಾಗಿ ಕೈಜೋಡಿಸಿದರೆ ಮೀಸಲಾತಿ ಪಡೆಯುವುದು ಕಷ್ಟವೇನಲ್ಲ ಎಂದರು.
ಮೊಳಕಾಲ್ಮೂರು ಕರಿಬಸಪ್ಪ ಮಾತನಾಡಿ, ಸಿದ್ದರಾಮಯ್ಯ ಮಾದಿಕ ಸಮುದಾಯಕ್ಕೆ ಮೋಸ ಮಾಡುತ್ತ ಬಂದಿದ್ದಾರೆ. ಆ. 15ರೊಳಗೆ ಒಳ ಮೀಸಲಾತಿ ಜಾರಿಯಾಗಬೇಕು. ಇಲ್ಲದಿದ್ದರೆ, ಸಾಂಕೇತಿಕ ಹೋರಾಟ ಉತ್ತರ ಭಾರತದ ಗುಜ್ಜಾರ್ ಮಾದರಿಯ ಸ್ವರೂಪ ಪಡೆಯಲಿದೆ. ಅಸಹಕಾರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಚಿತ್ರದುರ್ಗ ಮಹಂತೇಶ್ ಮಾತನಾಡಿ, ಪಕ್ಷಾತೀತವಾಗಿ ಹೋರಾಟಕ್ಕೆ ಮುಂದಾಗಿದ್ದೇವೆ. ಸಿಎಂ ಕಿವಿ ಹಿಂಡುವ ಕೆಲಸ ಮಾಡಬೇಕಿದೆ. ರಾಜಕಾರಣಿಗಳು ಸಮುದಾಯದ ಋಣ ತೀರಿಸಲು ಒತ್ತಡ ಹಾಕಬೇಕು ಎಂದು ಒತ್ತಾಯಿಸಿದರು.
ಹಿರಿಯೂರು ಹನುಮಂತಪ್ಪ ಮಾತನಾಡಿ, ಮಹತ್ತರ ಕಾರ್ಯ ಸಾಧಿಸಲು ಒಟ್ಟಾಗಿ ಸೇರಿದ್ದೇವೆ. ಕಾಂಗ್ರೆಸ್ ಸಮುದಾಯದ ಮತ ಪಡೆದು ವಂಚಿಸುತ್ತ ಬಂದಿದೆ. ಎಸ್ಸಿ-ಎಸ್ಟಿ ಅನುದಾನ ದುರ್ಬಳಕೆ ಮಾಡಿಕೊಂಡಿದೆ. ಸಿದ್ದರಾಮಯ್ಯ ಅಹಿಂದ ನಾಯಕರಲ್ಲ ಎಂಬುದು ಸಾಬೀತಾಗಿದೆ. ಮೀಸಲಾತಿ ಜಾರಿ ಮಾಡಬೇಕು. ಸ್ವಾತಂತ್ರೃ ಮಾದರಿಯ ಸತ್ಯಾಗ್ರಹ ಕೈಗೊಳ್ಳಲು ಅವಕಾಶ ನೀಡಬಾರದು. ಇಲ್ಲದಿದ್ದರೆ, ಸಮುದಾಯದ ಆಕ್ರೋಶಕ್ಕೆ ಕುರ್ಚಿ ಖಾಲಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹೊಸದುರ್ಗದ ಕೃಷ್ಣಮೂರ್ತಿ ಮಾತನಾಡಿ, ಸುಪ್ರೀಂ ಕೋರ್ಟ್ ತೀರ್ಪಿಗೆ ರಾಜ್ಯ ಸರ್ಕಾರ ಮನ್ನಣೆ ನೀಡಿ, ಅಂದೇ ಜಾರಿಗೊಳಿಸಿದ್ದರೆ ಸಮುದಾಯ ಮೆಚ್ಚುತ್ತಿತ್ತು. ಆದರೆ, ಸರ್ಕಾರದ ಮೇಲೆ ನಂಬಿಕೆ ಇಲ್ಲವಾಗಿದೆ. ಹೀಗಾಗಿ ಹೋರಾಟ ಅನಿವಾರ್ಯ ಎಂದರು.
ಡಿಸಿಗಾಗಿ ಕಾದ ಪ್ರತಿಭಟನಾಕಾರರು: ಒಳ ಮೀಸಲಾತಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿದರು. ಇದಕ್ಕೂ ಮುನ್ನ ಎಡಿಸಿ ಬಿ.ಟಿ. ಕುಮಾರಸ್ವಾಮಿ ಆಗಮಿಸಿದ್ದರು. ಡಿಸಿ ಅವರೇ ಅಹವಾಲು ಸ್ವೀಕರಿಸುವಂತೆ ಪಟ್ಟು ಹಿಡಿದು ಅರ್ಧ ತಾಸು ಕಾದು ಕುಳಿತಿದ್ದರು.
ಮುರಾರ್ಜಿ, ಭೀಮನಕೆರೆ ಶಿವಮೂರ್ತಿ, ಹನುಮಂತರಾಯಪ್ಪ, ಶಿವಣ್ಣ, ಬಸಮ್ಮ, ಕೃಷ್ಣಮೂರ್ತಿ ಸೇರಿ ಅನೇಕ ಮುಖಂಡರು ಇದ್ದರು.