ಚಿತ್ರದುರ್ಗ:ಒಳಮೀಸಲು ಪರ ಸುಪ್ರೀಂಕೋರ್ಟ್ ತೀರ್ಪು, ಮಾದಿಗ ಸಮುದಾಯದೊಂದಿಗೆ 101 ಪರಿಶಿಷ್ಟ ಜಾತಿಗಳಿಗೂ ಜನಸಂಖ್ಯೆ ಅನುಸಾರ ಸಾಮಾಜಿಕ ನ್ಯಾಯ ಒದಗಿಸಲಿದೆ ಎಂದು ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತೀರ್ಪಿನಿಂದ ಎಸ್ಟಿ ಸಮುದಾಯದವರಿಗೂ ಲಾಭ ದೊರೆಯಲಿದೆ. ಸಿಎಂ ಸಿದ್ದರಾಮಯ್ಯ ಅವರು ಕೂಡಲೇ ಒಳಮೀಸಲು ಜಾರಿಗೊಳಿಸಬೇಕು. ಈ ನಿಟ್ಟಿನಲ್ಲಿ ನಿಯೋಗ ತೆರಳಿ ಒತ್ತಾಯಿಸಲಾಗುವುದು ಎಂದರು.
ತೀರ್ಪಿನ ವೇಳೆ ಪ್ರಸ್ತಾಪವಾಗಿರುವ ಕೆನೆಪದರ, ಕೋರ್ಟ್‌ನ ಒಂದು ದೃಷ್ಟಿಕೋನವಾಗಿದೆಯೇ ಹೊರತು ಅದಕ್ಕೂ ಒಳಮೀಸಲಿಗೂ ಸಂಬಂಧವಿಲ್ಲ. ಕೇಂದ್ರ ಸರ್ಕಾರ ಕೆನೆಪದರದ ಬಗ್ಗೆ ಸ್ಪಷ್ಟಪಡಿಸಿದ ಬಳಿಕವೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಪಸ್ವರ ಎತ್ತಿರುವುದು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.
ಈವರೆಗೂ ಅವರು ತೀರ್ಪನ್ನು ಸ್ವಾಗತಿಸಿಲ್ಲ. ಕೆನೆಪದರ ಕುರಿತು ಅನಗತ್ಯ ಗೊಂದಲ ಸರಿಯಲ್ಲ. ಅಗತ್ಯವೆನಿಸಿದರೆ ಖರ್ಗೆ ಅವರನ್ನೂ ಭೇಟಿ ಮಾಡಲಾಗುವುದು ಎಂದು ಹೇಳಿದರು.
ಒಳ ಮೀಸಲು ಹೋರಾಟಕ್ಕೆ 3 ದಶಕಗಳ ಇತಿಹಾಸವಿದೆ. ಒಳಮೀಸಲು ಜಾರಿ ನಿರ್ಧಾರವನ್ನು ರಾಜ್ಯ ಸರ್ಕಾರಗಳಿಗೆ ಕೋರ್ಟ್ ನೀಡಿದೆ. ಸಂಪುಟ, ಪರಿಶೀಲನಾ ಹಾಗೂ ಅಧ್ಯಯನ ಸಮಿತಿಗಳೆಂದು ಕಾಲಹರಣ ಮಾಡದೆ ಒಳಮೀಸಲು ಜಾರಿಗೊಳಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಬದ್ಧತೆ ಪ್ರದರ್ಶಿಸಬೇಕು. ಒಳಮೀಸಲು ಜಾರಿ ಆಗುವವರೆಗೂ ಕೆಪಿಎಸ್‌ಸಿ ಸೇರಿ ಎಲ್ಲ ಸರ್ಕಾರಿ ನೇಮಕಗಳನ್ನು ಸ್ಥಗಿಗೊಳಿಸಬೇಕೆಂದರು.
ಒಳ ಮೀಸಲು ಹೋರಾಟಗಳಿಗೆ ಶ್ರೀ ಗುರುಪೀಠ ಹೋರಾಟಗಳಿಗೆ ಇತಿ-ಮಿತಿಯೊಳಗೆ ಕೈ ಜೋಡಿಸಿದೆ. ಮಂದಕೃಷ್ಣ ಮಾದಿಗ, ಶಂಕರಪ್ಪ ಸೇರಿ ಅನೇಕ ಪ್ರಮುಖರು ಹೋರಾಟವನ್ನು ಮುನ್ನಡೆಸಿದ್ದಾರೆ. ರಾಜ್ಯ, ಕೇಂದ್ರದಲ್ಲಿ ಯಾವುದೇ ಪಕ್ಷದ ಆಡಳಿತವಿದ್ದರೂ ಗುರುಪೀಠ ತನ್ನ ಕಾರ‌್ಯವನ್ನು ನಿರ್ವಹಿಸಿದೆ ಎಂದರು.
ರಾಜ್ಯಮಾದಿಗ ಹೋರಾಟ ಸಮಿತಿ ಅಧ್ಯಕ್ಷ ಬಳ್ಳಾರಿ ಎಚ್.ಹನುಮಂತಪ್ಪ ಮಾತನಾಡಿ, ತೀರ್ಪು ಪ್ರಕಟವಾಗುತ್ತಿದ್ದಂತೆ ಆಂಧ್ರಪ್ರದೇಶ ಹಾಗೂ ತೆಲಂಗಾಣದ ಮುಖ್ಯಮಂತ್ರಿಗಳು ತಕ್ಷಣ ಸ್ಪಂದಿಸಿದ್ದಾರೆ. ಆದರೆ ಅಹಿಂದ ನಾಯಕ ಸಿದ್ದರಾಮಯ್ಯ ಅವರು ಮೀನಮೇಷ ಎಣಿಸುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯಮಾದಿಗ ಮಹಾಸಭಾದ ಅಧ್ಯಕ್ಷ ಮುತ್ತಣ್ಣ ಬೆನ್ನೂರು ಮಾತನಾಡಿ, ಒಳಮೀಸಲು ಹೋರಾಟಕ್ಕೆ ಪೂರಕವಾಗಿ ಮಾದಾರ ಶ್ರೀಗಳು, ಎಲ್ಲ ಹೋರಾಟಗಾರರು, ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಮೊದಲಾದ ಪ್ರಮುಖರ ವಿಶ್ವಾಸ ಪಡೆದು ಕೆಲಸ ಮಾಡಿದ್ದಾರೆ ಎಂದರು.
ರಾಜ್ಯಮಾದಿಗ ದಂಡೋರ ಸಮಿತಿ ಅಧ್ಯಕ್ಷ ಪಾವಗಡ ಶ್ರೀರಾಮ್, ಸೊರಕುಂಟೆ ಯೋಗೀಶ್, ಬಿ.ಜಿ.ಸಾಗರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ‌್ಯದರ್ಶಿ ಜಿ.ಎಚ್.ಮೋಹನ್ ಇದ್ದರು. (ಸಿಟಿಡಿ 12 ಪ್ರೆಸ್‌ಮೀಟ್ ಮಾದಾರ ಶ್ರೀ)
ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದಲ್ಲಿ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಅವರನ್ನು ಮಾದಿಗ ಸಮುದಾಯದ ಮುಖಂಡರು ಗೌರವಿಸಿದರು. ಬಳ್ಳಾರಿ ಎಚ್.ಹನುಮಂತಪ್ಪ, ಮುತ್ತಣ್ಣ ಬೆನ್ನೂರು, ಬಿ.ಜಿ.ಸಾಗರ್, ಪಾವಗಡ ಶ್ರೀರಾಮ್, ಸೊರಕುಂಟೆ ಯೋಗೀಶ್, ಜಿ.ಎಚ್.ಮೋಹನ್ ಇದ್ದರು.