ಜಿಲ್ಲೆ

ಒಳಮೀಸಲು ಜಾರಿಗೆ ಮುಂದಾಗದಿದ್ದರೆ ಆಂದೋಲನ

Chitradurga - Desk - Pranav Kumar

ಚಿತ್ರದುರ್ಗ: ರಾಜ್ಯದಲ್ಲಿ ಒಳ ಮೀಸಲಾತಿ ಜಾರಿಗೆ ಬದ್ಧವೆಂದು ಅಧಿವೇಶನದಲ್ಲಿ ಸಿಎಂ, ಸಚಿವರು ಹೇಳಬೇಕಿತ್ತು. ಖಾತ್ರಿಪಡಿಸದ ಕಾರಣ ಆಂದೋಲನ ಅನಿವಾರ್ಯ ಎಂದು ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದರು.

ತರಾಸು ರಂಗಮಂದಿರದಲ್ಲಿ ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆಯಿಂದ ಒಳಮೀಸಲಾತಿ ಜಾರಿಗಾಗಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಮಾದಿಗ ವಕೀಲರ ಮೊದಲ ಬೃಹತ್ ಸಮಾವೇಶದ ಸಾನ್ನಿಧ್ಯವಹಿಸಿ ಮಾತನಾಡಿದರು.

ಕಾಂಗ್ರೆಸ್‌ನಲ್ಲಿನ ಸಮುದಾಯದ ಮುಖಂಡರ ಹೇಳಿಕೆಯಿಂದ ನಂಬಿಕೆ ಬರಲಾರದು. ಸರ್ಕಾರದಿಂದ ಸಮಾಜಕ್ಕೆ ವಿಶ್ವಾಸ ಮೂಡಬೇಕು. ಈ ಕುರಿತು ಸದನದಲ್ಲಿ ಸಿಎಂ ಒಂದು ಮಾತನ್ನು ಹೇಳಿಲ್ಲ. ಮೂರ‌್ನಾಲ್ಕು ದಶಕಗಳ ಹೋರಾಟದಲ್ಲಿ ಏಳು ಮಂದಿಯನ್ನು ಕಳೆದುಕೊಂಡಿದ್ದೇವೆ. ಇದು ಪುನರಾವರ್ತನೆ ಆಗಬಾರದು ಎಂದು ಸಲಹೆ ನೀಡಿದರು.

ಸದನದಲ್ಲಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮೀಸಲಾತಿ ಕುರಿತು ದನಿ ಎತ್ತಿದರೆ, ಅದಕ್ಕೆ ದನಿಗೂಡಿಸಬೇಕಿದ್ದ ಸಮಾಜದ ಚುನಾಯಿತರು ಮೌನ ವಹಿಸಿದ್ದರಿಂದ ಹೋರಾಟ ಮುಂದುವರಿಯಲಿದೆ ಎಂದರು.

ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ಹರಿಯಾಣದಲ್ಲಿ 9 ವರ್ಷ ಒಳ ಮೀಸಲಾತಿ ಜಾರಿಯಲ್ಲಿತ್ತು. ಕರ್ನಾಟಕದಲ್ಲಿ ಮೀಸಲಾತಿ ಸೌಲಭ್ಯ ಪಡೆದು ಅಧಿಕಾರಕ್ಕೆ ಬಂದವರು ಲಾಠಿ ಏಟು ತಿಂದವರ ದನಿಯಾಗಿ ನಿಲ್ಲಲಿಲ್ಲ. ದೇಶದ ರಾಷ್ಟ್ರೀಯ, ರಾಜ್ಯದ ಪ್ರಾದೇಶಿಕ ಪಕ್ಷಗಳಿಂದ ನ್ಯಾಯ ಸಿಕ್ಕಿಲ್ಲ ಎಂದು ಬೇಸರಿಸಿದರು.

ಇಂಪೀರಿಯಲ್ ಡೇಟಾ ಕುರಿತು ಮಾಹಿತಿ ಇಲ್ಲದ ನರೇಂದ್ರಸ್ವಾಮಿ ಮೂರ್ಖ. 200ಕ್ಕೂ ಹೆಚ್ಚು ಮಂದಿ ಶಾಸಕರು ಬದುಕಿದ್ದಾರೋ, ಇಲ್ಲವೋ ಅರ್ಥವಾಗುತ್ತಿಲ್ಲ. ಮಾದಿಗರ ವಿರುದ್ಧ ಏನು ಮಾತನಾಡಿದರೂ ನಡೆಯುತ್ತದೆಂಬ ಭಾವನೆ ಇದೆ. ಹೀಗಾಗಿ ಎಚ್ಚರಿಸುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.

ಬಹುಜನ ಚಳವಳಿಗಾರ ಮಾರಸಂದ್ರ ಮುನಿಯಪ್ಪ ಮಾತನಾಡಿ, ಸಿದ್ದರಾಮಯ್ಯ ಒಳಮೀಸಲಾತಿ ಸಂಬಂಧ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿಗೆ ಬೆಲೆ ಕೊಡದೆ, ಉಪ ಚುನಾವಣೆ ಕಾರಣ ನೀಡಿ ತುರ್ತು ಸಂಪುಟದಲ್ಲಿ ಚರ್ಚಿಸಿ, ಆಯೋಗ ರಚಿಸಿದರು. ಇದರ ಅಗತ್ಯವಿರಲಿಲ್ಲ ಎಂದರು.

ಬಿಜೆಪಿ, ಕಾಂಗ್ರೆಸ್ ಮಾಡಲಿಲ್ಲ. ದಳ ಚಕಾರವೇ ಎತ್ತುತ್ತಿಲ್ಲ. ವಿದ್ಯಾವಂತರಾದ ವಕೀಲರು ಈಗ ಎಚ್ಚೆತ್ತುಕೊಂಡು ಬೀದಿಗಿಳಿದು ಹೋರಾಟಕ್ಕೆ ಮುಂದಾಗಿರುವುದು ಸ್ವಾಗತಾರ್ಹ. ಕೂಡಲೇ ಜಾರಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಚಳವಳಿ ಮೂಲಕವಾದರೂ ಪಡೆಯಲೇಬೇಕು ಎಂದು ಸಲಹೆ ನೀಡಿದರು.

ವಕೀಲರ ವೇದಿಕೆ ಅಧ್ಯಕ್ಷ ಎಸ್.ಅರುಣ್‌ಕುಮಾರ್ ಮಾತನಾಡಿ, ಸದಾಶಿವ ಆಯೋಗದ ವರದಿಯಲ್ಲೇ ಅಗತ್ಯ ಇಂಪೀರಿಯಲ್ ಡೇಟಾ ಇದೆ. ಒಳ ಮೀಸಲಾತಿ ಜಾರಿಗೆ ಇದೇ ಸಾಕು. ಆದರೂ ಸರ್ಕಾರ ಆಯೋಗ ರಚಿಸಿ, ಅಧಿಕಾರ ನೀಡಿಲ್ಲ. ವಿಳಂಬದ ಜೊತೆಗೆ ಗಮನ ಬೇರೆಡೆ ಸೆಳೆಯಲು ಮುಂದಾಗಿದೆ ಎಂದು ಬೇಸರಿಸಿದರು.

ತಮಟೆ ವಾದ್ಯಕ್ಕೆ ವಕೀಲರ ನೃತ್ಯ: ಒಳಮೀಸಲಾತಿ ಜಾರಿಗಾಗಿ ಕಾರ್ಯಕ್ರಮಕ್ಕೂ ಮುನ್ನ ವಕೀಲರು ತಮಟೆ ಕಲಾತಂಡದೊಂದಿಗೆ ಘೋಷಣೆ ಕೂಗುತ್ತ ಮೆರವಣಿಗೆ ನಡೆಸಿದರು. ಈ ವೇಳೆ ವಾದ್ಯಕ್ಕೆ ತಕ್ಕಂತೆ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು.

ಮಂಡ್ಯದ ನಿ. ಜಿಲ್ಲಾ ನ್ಯಾಯಾಧೀಶ ಎಚ್.ಸಿ.ಶ್ಯಾಮ್‌ಪ್ರಸಾದ್, ಮಾಜಿ ಶಾಸಕ ವೀರಭದ್ರಪ್ಪ ಹಾಲರವಿ, ವೇದಿಕೆ ಪ್ರಧಾನ ಕಾರ್ಯದರ್ಶಿ ಬೂದಿತಿಟ್ಟು ರಾಜೇಂದ್ರ, ವಕೀಲರಾದ ಎಸ್.ಮಾರೆಪ್ಪ, ವಿಜಯ್‌ಕುಮಾರ್, ಬೀಸ್ನಹಳ್ಳಿ ಜಯಪ್ಪ, ಟಿ.ಹನುಮಂತಪ್ಪ, ಎಂ.ದಾಸಯ್ಯ, ಶಿವಕುಮಾರ್ ಎಂ ಬೆಳ್ತೂರು, ಮಾಳಪ್ಪ ಕುರ್ಕಿ, ಎಂ.ಆರ್.ಸುರೇಂದ್ರಕುಮಾರ್, ಕುಮಾರಪ್ಪ, ಜಿ.ಕೆ.ಮಲ್ಲಿಕಾರ್ಜುನ್, ನರಹರಿ, ಎನ್.ಚಂದ್ರಪ್ಪ, ಚಂದ್ರಸೇನಾ ಸಾಗರ್ ಸೇರಿ ರಾಜ್ಯದ ವಿವಿಧೆಡೆಯ 500ಕ್ಕೂ ಹೆಚ್ಚು ವಕೀಲರು ಪಾಲ್ಗೊಂಡಿದ್ದರು.