ಜಿಲ್ಲೆ

ಒಳಮೀಸಲು ಅಧಿವೇಶನದಲ್ಲಿ ಮಂಡಿಸಲು ಪಟ್ಟು

Chitradurga - Desk - Pranav Kumar

ಚಿತ್ರದುರ್ಗ: ಬೆಳಗಾವಿ ಅಧಿವೇಶನದೊಳಗೆ ಒಳ ಮೀಸಲಾತಿ ಕುರಿತು ನ್ಯಾ.ಎ.ಜೆ.ಸದಾಶಿವ ಆಯೋಗ ನೀಡಿರುವ ವರದಿ ಮಂಡಿಸಿ, ಚರ್ಚಿಸಿ, ಸಕಾರಾತ್ಮಕ ತೀರ್ಮಾನ ತೆಗೆದುಕೊಳ್ಳದಿದ್ದರೆ, ನಂತರದ ದಿನಗಳಲ್ಲಿ ಇಡೀ ರಾಜ್ಯಾದ್ಯಂತ ಕಾಂಗ್ರೆಸ್ ವಿರುದ್ಧ ಅಭಿಯಾನ ಆರಂಭಿಸಲಾಗುವುದು ಎಂದು ಹೈಕೋರ್ಟ್ ವಕೀಲ ಎ.ಹರಿರಾಮ್ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಒಳಮೀಸಲಾತಿ ಜಾರಿಗೊಳಿಸುವ ಭರವಸೆ ಕಾಂಗ್ರೆಸ್ ನೀಡಿತ್ತು. ಮಾತು ತಪ್ಪಿದರೆ, ಬಿಜೆಪಿಗೆ ವಿಧಾನಸಭಾ ಚುನಾವಣೆಯಲ್ಲಿ ಪಾಠ ಕಲಿಸಿದಂತೆ ಲೋಕಸಭೆಯಲ್ಲಿ ಕಾಂಗ್ರೆಸ್ಸಿಗರಿಗೆ ತಕ್ಕ ಉತ್ತರ ದಲಿತ ಸಮುದಾಯ ನೀಡಲಿದೆ ಎಂದು ಎಚ್ಚರಿಸಿದರು.

ಸದಾಶಿವ ಆಯೋಗ ರಾಜ್ಯದ 90 ಲಕ್ಷ ಜನರನ್ನು ಭೇಟಿಯಾಗಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಿಯೇ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆದರೆ, ಮತ ಬ್ಯಾಂಕ್ ಆಗಿ ದಲಿತರನ್ನು ಬಳಸಿಕೊಳ್ಳುತ್ತಿರುವ ಕಾಂಗ್ರೆಸ್ ಮೀನಾಮೇಷ ಎಣಿಸುತ್ತಿದೆ. ಎಸ್ಸಿಯಲ್ಲಿನ 101 ಜಾತಿಗಳಿಗೂ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಬೇಕಾದರೆ, ಈ ವರದಿ ಜಾರಿಯಾಗಲೇಬೇಕು ಎಂದು ಮೀಸಲಾತಿ ಜಾಗೃತಿ ಸಮಿತಿ ಪರವಾಗಿ ಒತ್ತಾಯಿಸಿದರು.

ರಾಜ್ಯದಲ್ಲಿ ಬಿಜೆಪಿ ಸದಾಶಿವ ಆಯೋಗದ ವರದಿ ಶಿಫಾರಸು ಮಾಡಿಲ್ಲ. ಮಾಜಿ ಸಚಿವ ಮಾಧುಸ್ವಾಮಿ ನೇತೃತ್ವದ ಉಪ ಸಮಿತಿ ವರದಿ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಇದು ಕಣ್ಣೊರೆಸುವ ಕುತಂತ್ರ. ಈಗ ತೆಲಂಗಾಣದಲ್ಲಿ ಚುನಾವಣೆ ನಡೆಯುತ್ತಿರುವ ಕಾರಣ ಪ್ರಧಾನಿ ಅವರು ಮತ್ತೊಂದು ಆಯೋಗ ರಚಿಸುವುದಾಗಿ ತಿಳಿಸಿದ್ದಾರೆ. ಇದರ ಅಗತ್ಯವಿಲ್ಲ. 4 ದಶಕಗಳ ಹೋರಾಟಕ್ಕೆ ನ್ಯಾಯ ಸಿಗದಿದ್ದರೆ, ಪ್ರತಿ ಗ್ರಾಮದಲ್ಲೂ ಕಾಂಗ್ರೆಸ್ ವಿರುದ್ಧ ಅಭಿಯಾನ ಖಚಿತ ಎಂದರು.

ರಾಜ್ಯ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ.ಆರ್.ಭಾಸ್ಕರ್‌ಪ್ರಸಾದ್ ಮಾತನಾಡಿ, ಅಧಿವೇಶನದೊಳಗೆ ಸಿಎಂ ಸಿದ್ದರಾಮಯ್ಯ ಮಂಡಿಸುವ ವಿಶ್ವಾಸವಿದೆ. ಇದಕ್ಕೆ ಸ್ಪಂದಿಸದಿದ್ದರೆ, ನಮ್ಮ ಹೋರಾಟದ ರೂಪುರೇಷೆ ಬದಲಾಗಲಿದೆ. ಅದಕ್ಕೆ ಆಸ್ಪದ ಕೊಡಬೇಡಿ. ಬೀದಿಗಿಳಿದು ಸರ್ಕಾರದ ವಿರುದ್ಧ ತಿರುಗಿ ಬೀಳುವಂತೆ ಮಾಡಬೇಡಿ ಎಂದು ಮನವಿ ಮಾಡಿದರು.

ಬಿಜೆಪಿ-ಕಾಂಗ್ರೆಸ್ ಒಂದೇ ಸರ್ಪದ ಎರಡು ಮೊಟ್ಟೆಗಳಿದ್ದಂತೆ. ಎರಡು ಪಕ್ಷಗಳೂ ಸಮುದಾಯಕ್ಕೆ ನ್ಯಾಯ ಒದಗಿಸದೆ, ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ದಾರಿ ತಪ್ಪಿಸುತ್ತಿವೆ. ಈ ಬಾರಿ ಸಮುದಾಯ ಅದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಸಿದರು.

ಮುಖಂಡರಾದ ಬಾಳೇಕಾಯಿ ಶ್ರೀನಿವಾಸ್, ಮಂಜುನಾಥ್ ಇದ್ದರು.