ಜಿಲ್ಲೆ

ಒಳಮೀಸಲಿಗೆ ಮಾದಿಗ ಸಂಘಟನೆಗಳ ಶಕ್ತಿ ಪ್ರದರ್ಶನ

ಚಿತ್ರದುರ್ಗ: ರಾಜ್ಯದಲ್ಲಿ ತ್ವರಿತವಾಗಿ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು, ಮುಖಂಡರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ನೀಲಕಂಠೇಶ್ವರ ಸ್ವಾಮಿ ದೇಗುಲ ಬಳಿ ನೂರಾರು ಕಾರ್ಯಕರ್ತರು ಜಮಾಯಿಸಿದರು. ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಕೆಲವರು ಅರೆ ಬೆತ್ತಲಾಗಿ ಆಕ್ರೋಶ ವ್ಯಕ್ತಪಡಿಸಿದರು.

ಒನಕೆ ಓಬವ್ವ ವೃತ್ತದ ಬಳಿ ಮುಖ್ಯಮಂತ್ರಿಯ ಕಲ್ಪಿತ ಶವ ಪ್ರದರ್ಶಿಸಿ, ಧಿಕ್ಕಾರ ಕೂಗಿದರು. ಒಳ ಮೀಸಲು ಜಾರಿಯಾಗಲೇಬೇಕೆಂದು ಸಿಎಂಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

ಸಂಘಟಕ ಮೋಹನ್‌ಕುಮಾರ್ ಮಾತನಾಡಿ, ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಕಾಂಗ್ರೆಸ್ ಸರ್ಕಾರ ಒಳ ಮೀಸಲು ಜಾರಿಗೊಳಿಸಬೇಕಿತ್ತು. ಆದರೆ, ಸಿಎಂ ಸಿದ್ದರಾಮಯ್ಯ ಮಾತು ತಪ್ಪಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಜಿ.ಪರಮೇಶ್ವರ್, ಎಚ್.ಸಿ.ಮಹದೇವಪ್ಪ, ಪ್ರಿಯಾಂಕ ಖರ್ಗೆ ಸೇರಿ ಇವರ್ಯಾರೂ ತುಟಿ ಬಿಚ್ಚುತ್ತಿಲ್ಲ. ಮೀಸಲಾತಿ ವಿರೋಧಿ ಸರ್ಕಾರ ಎಂದು ಕಿಡಿಕಾರಿದರು.

ಒಳ ಮೀಸಲು ನೀಡಿದರೆ, ಮಾದಿಗ ಸಮುದಾಯದವರು ವಿದ್ಯಾವಂತರಾಗಿ ಪುಡಿಗಾಸಿಗೆ ಮತ ನೀಡಲಾರರು ಎಂಬ ಆತಂಕವೂ ಕಾಂಗ್ರೆಸ್‌ಗೆ ಕಾಡಲಾರಂಭಿಸಿದೆ. ಸಹೋದರ ಸಮುದಾಯವೆಂದು ಹೇಳಿಕೊಂಡೆ 4 ದಶಕಗಳಿಂದಲೂ ವಂಚಿಸುತ್ತ ಬಂದಿದ್ದಾರೆ. ಇನ್ನೂ ವಿಳಂಬ ಮಾಡಿದರೆ, ತಾಳ್ಮೆ ಕಳೆದುಕೊಂಡು ತೀವ್ರ ಸ್ವರೂಪದ ಹೋರಾಟಕ್ಕೂ ಸಿದ್ಧ ಎಂದರು.

ಸಂಘಟಕ ಕೆ.ಟಿ.ಶಿವಕುಮಾರ್ ಮಾತನಾಡಿ, ಒಳ ಮೀಸಲಾತಿ ಭಿಕ್ಷೆಯಲ್ಲ. ಅದು ನಮ್ಮ ಹಕ್ಕು. ಸಿಎಂ ಜಾರಿಗೆ ಮುಂದಾಗದಿದ್ದರೆ, ಅ. 21ರಂದು ಚಳ್ಳಕೆರೆಗೆ ಬರುವ ವೇಳೆ ೇರಾವ್ ಹಾಕಲಾಗುವುದು. ಹೋರಾಟಗಾರರನ್ನು ಬಂಧಿಸಿದರೆ, ತಾಯಂದಿರು, ಅಕ್ಕ-ತಂಗಿಯರು, ಮಕ್ಕಳು ಚಳವಳಿ ಮುಂದುವರೆಸುತ್ತಾರೆ. ಅದಕ್ಕೆ ಆಸ್ಪದ ನೀಡದೆ ಅನುಷ್ಠಾನಕ್ಕೆ ತರಬೇಕು. ಅಂದು ಒಕ್ಕೂಟದ ಮನವಿ ಸ್ವೀಕರಿಸಿ, ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಸಂಘಟಕ ಹನುಮಂತಪ್ಪ ದುರ್ಗ ಮಾತನಾಡಿ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿ ಯಾವ ಪಕ್ಷಕ್ಕೂ ಮಾದಿಗ ಸಮುದಾಯದ ಮೇಲೆ ಕಾಳಜಿ ಇಲ್ಲ. ಇದ್ದಿದ್ದರೆ, ಸುಪ್ರೀಂ ಕೋರ್ಟ್ ಆದೇಶ ನೀಡಿ ಎರಡು ತಿಂಗಳು ಕಳೆದರೂ ಜಾರಿಯಾಗದಿರುವುದೇ ಇದಕ್ಕೆ ಸಾಕ್ಷಿ. ನಾಲ್ಕು ದಶಕಗಳಿಂದಲೂ ಹೋರಾಟ ನಡೆಸುತ್ತಿದ್ದು, ಅನೇಕರು ಜೀವ ಕಳೆದುಕೊಂಡಿದ್ದಾರೆ. ಸಮುದಾಯಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲದು. ಮಾದಿಗರು ಬೀದಿಗಿಳಿದರೆ, ಸರ್ಕಾರವೇ ಪತನವಾಗಲಿದೆ ಎಂಬುದನ್ನು ಮರೆಯಬಾರದು ಎಂದರು.

ವಕೀಲ ಚಂದ್ರಣ್ಣ ಮಾತನಾಡಿ, ಮನವಿಗೆ ಸರ್ಕಾರ ಸ್ಪಂದಿಸದಿದ್ದರೆ, ಕಾನೂನಾತ್ಮಕವಾಗಿಯೇ ಒಳ ಮೀಸಲಾತಿ ಪಡೆಯೋಣ. ಆದರೆ, ಅಲ್ಲಿಯವರೆಗೂ ಹೋರಾಟ ಮುಂದುವರೆಸೋಣ. ಡಾ.ಬಿ.ಆರ್.ಅಂಬೇಡ್ಕರ್ ಅವರ ಶಿಕ್ಷಣ, ಹೋರಾಟ, ಸಂಘಟನೆಯನ್ನೇ ಪ್ರಮುಖ ಅಸ್ತ್ರವಾಗಿಸಿಕೊಂಡು ಮುನ್ನುಗೋಣ ಎಂದರು.

ಜಾತಿ ಜನಗಣತಿ ಜಾರಿಗೊಳಿಸಿ: ಸಾಮಾಜಿಕ, ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಒಳ ಮೀಸಲು ಅಗತ್ಯ. ಅದೇ ರೀತಿ ರಾಜಕೀಯ ಪ್ರಾತಿನಿಧ್ಯ ಪಡೆಯಲಿಕ್ಕಾಗಿ ಜಾತಿ ಜನಗಣತಿ ವರದಿ ಬಹಿರಂಗಪಡಿಸಿ, ಜಾರಿಗೊಳಿಸಿ ಎಂದು ಸರ್ಕಾರಕ್ಕೆ ಚಳ್ಳಕೆರೆ ಶಿವಮೂರ್ತಿ ಒತ್ತಾಯಿಸಿದರು.

ಘೋಷಣೆಗಳ ಮೂಲಕವೂ ಆಕ್ರೋಶ: ಮೊದಲ ಸಚಿವ ಸಂಪುಟದಲ್ಲೇ ಜಾರಿಗೊಳಿಸುವುದಾಗಿ ಬುರುಡೆ ಬಿಟ್ಟ ಕಾಂಗ್ರೆಸ್. ಬಿಜೆಪಿ ಒಳ ಮೀಸಲು ಬೆಂಬಲಿಸಿ ಹರಿಯಾಣ ರಾಜ್ಯದಲ್ಲಿ 3ನೇ ಬಾರಿಯೂ ಗೆದ್ದಿದ್ದು, ಇಲ್ಲಿಯೂ ಆ ಸ್ಥಿತಿ ನಿರ್ಮಾಣವಾಗಲಿದೆ. ಸಚಿವರೇ, ಶಾಸಕರೇ ಎಲ್ಲಿ ಅಡಗಿದ್ದೀರಿ. ಹುಬ್ಬಳ್ಳಿಯ ಗಲಭೆಕೋರರ ಮೇಲಿನ ಕೇಸ್ ಹಿಂಪಡೆಯುವ ಕಾಂಗ್ರೆಸ್, ದಲಿತರ ಒಳಮೀಸಲಾತಿ ಕುರಿತು ಮೌನ ವಹಿಸುತ್ತಿರುವುದೇಕೆ.. ಹೀಗೆ ಆಕ್ರೋಶಭರಿತ ಅನೇಕ ಘೋಷಣೆಗಳು, ಅಂಬೇಡ್ಕರ್ ಭಾವಚಿತ್ರ ಗಮನ ಸೆಳೆದವು.

ಪ್ರತಿಭಟನೆ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು. ಒಕ್ಕೂಟದ ಬಾಳೇಕಾಯಿ ಶ್ರೀನಿವಾಸ್, ಡಿ.ಒ.ಮೊರಾರ್ಜಿ, ಪ್ರಕಾಶ್ ಬೀರಾವರ, ಏಕಾಂತಪ್ಪ, ಹುಲ್ಲೂರು ಕುಮಾರ್, ಲೋಕೇಶ್ ಸಿದ್ಧಾಪುರ, ಬಿ.ಪಿ.ಪ್ರೇಮನಾಥ್, ದುರ್ಗಪ್ಪ, ಕೆ.ಪಿ.ಶ್ರೀನಿವಾಸ್, ಸರೋಜಮ್ಮ ಇತರರಿದ್ದರು.