ದೇವದುರ್ಗ: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ದಲಿತ ಸಮುದಾಯಗಳಲ್ಲಿ ವೈಮನಸ್ಸು ಮೂಡಲು ಕಾರಣವಾಗಿದ್ದು, ರಾಜ್ಯ ಸರ್ಕಾರ ವರದಿಯ ಶಿಫಾರಸುಗಳನ್ನು ಜಾರಿಗೆ ಮುಂದಾಗಬಾರದು ಎಂದು ಆಗ್ರಹಿಸಿ ಅಖಿಲ ಭಾರತ ಬಂಜಾರ ಸೇವಾ ಸಂಘದ ನೇತೃತ್ವದಲ್ಲಿ ಪಟ್ಟಣದ ಮಿನಿವಿಧಾನಸೌಧ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಒಳಮೀಸಲಾತಿ ಕುರಿತು ನೀಡಿರುವ ಹೇಳಿಕೆ ಹಾಗೂ ಸರ್ಕಾರ ಕೈಗೊಂಡ ನಿರ್ಧಾರ ಖಂಡನೀಯ. ನ್ಯಾ.ಸದಾಶಿವ ಆಯೋಗದ ವರದಿ ಅವೈಜ್ಞಾನಿಕವಾಗಿದ್ದು, ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಒಳಮೀಸಲಾತಿ ಎನ್ನುವುದು ಸರಿಯಾದ ಕ್ರಮವಲ್ಲ. ಇದು ಡಾ.ಬಿ.ಆರ್.ಅಂಬೇಡ್ಕರ್ ನೀಡಿರುವ ಸಂವಿಧಾನಕ್ಕೆ ಮಾಡುವ ಅಪಮಾನವಾಗಲಿದೆ. ಒಳಮೀಸಲಾತಿಯಿಂದ ದಲಿತ ಸಮುದಾಯದ 90 ಜಾತಿಗಳಿಗೆ ಅನ್ಯಾಯವಾಗಲಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳ ಜನಸಂಖ್ಯೆವಾರು ಜನಗಣತಿ ಮಾಡಬೇಕು. ದಲಿತ ಸಮುದಾಯದ ಎಲ್ಲ ಜಾತಿಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕ ಆಧಾರದಲ್ಲಿ ಸಮೀಕ್ಷೆ ನಡೆಸಿ ನಿರ್ಧಾರ ಕೈಗೊಳ್ಳಬೇಕು. ಮೀಸಲಾತಿಯಲ್ಲಿ ಯಾವುದೇ ಜಾತಿಗಳಿಗೆ ಅನ್ಯಾಯ ಮಾಡದೆ ಸಮರ್ಪಕವಾಗಿ ನ್ಯಾಯ ಸಿಗುವಂತೆ ನೀಡಬೇಕು ಎಂದು ಆಗ್ರಹಿಸಿದರು. ಪ್ರಮುಖರಾದ ಶೇಖರಪ್ಪ ರಾಠೋಡ್, ಸೀತಾರಾಮ್ ನಾಯ್ಕ, ರಾಮು ನಾಯ್ಕ, ಶಂಕ್ರಪ್ಪ, ಬಾಸುನಾಯ್ಕ, ರಾಜಶೇಖರ, ವೆಂಕಟೇಶ ಇತರರಿದ್ದರು.