ಒಳಮೀಸಲಾತಿ ವಿರೋಸಿ ಶಿಕಾರಿಪುರದಲ್ಲಿ ತಾಲೂಕು ಬಂಜಾರ ಸೇವಾ ಸಂಘ ವಿವಿಧ ಸಂಘಗಳ ಸಹಯೋಗದೊಂದಿಗೆ ಪ್ರತಿಭಟನೆ ನಡೆಸಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿತು. ಸೈನಾ ಭಗತ್ ಸ್ವಾಮೀಜಿ, ಗಂಗಾನಾಯ್ಕ, ಲೋಹಿತ್ ನಾಯಕ್, ಮಂಜನಾಯ್ಕ, ರಾಘವೇಂದ್ರ ನಾಯಕ್ ಇತರರಿದ್ದರು. 
ಜಿಲ್ಲೆ

ಒಳಮೀಸಲಾತಿ ತಿದ್ದುಪಡಿ ಆಗ್ರಹಿಸಿ ಪ್ರತಿಭಟನೆ

ಟಿ.ಎಚ್.ಸಂತೋಷ್ ಕುಮಾರ್

ಶಿಕಾರಿಪುರ: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರದಿ ಪಟ್ಟಿಯಲ್ಲಿ ಲೋಪವಿದೆ. ಇದರಿಂದ ಹಲವು ಜಾತಿಯವರಿಗೆ ಅನ್ಯಾಯವಾಗುತ್ತದೆ ಎಂದು ಆರೋಪಿಸಿ ಶಿಕಾರಿಪುರ ತಾಲೂಕು ಬಂಜಾರ ಸೇವಾ ಸಂಘ, ಬಂಜಾರ ಮಹಿಳಾ ಸಂಘ, ಗೋರ್‌ಸೇನಾ ರಾಷ್ಟ್ರೀಯ ಸಂಘಟನೆಗಳು ಶನಿವಾರ ಪ್ರತಿಭಟನೆ ನಡೆಸಿದವು.

ಬಂಜಾರ ಮಹಾಮಠದ ಸೈನಾ ಭಗತ್ ಸ್ವಾಮೀಜಿ ಮಾತನಾಡಿ, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಸದಾಶಿವ ಆಯೋಗದ ವರದಿಯಲ್ಲಿ ಲಂಬಾಣಿ, ಬೋವಿ, ಕೊರಚ, ಕೊರಮ ಸೇರಿದಂತೆ 63 ಜಾತಿಗಳಿವೆ. ಶೇ.5ರಷ್ಟು ಮಾತ್ರವೇ ಮೀಸಲಾತಿ ನಿಗದಿಗೊಳಿಸಿರುವುದು ಅನ್ಯಾಯ ಎಂದರು.

ಶೇ.18ರ ಮೀಸಲಾತಿ ಅಡಿಯಲ್ಲಿ ಪರಿಶಿಷ್ಟ ಜಾತಿಗೆ ಶೇ.15ರಷ್ಟು, ಪರಿಶಿಷ್ಟ ಪಂಗಡಗಳಿಗೆ ಶೇ.3ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಆದರೆ ಒಳಮೀಸಲಾತಿ ವರ್ಗೀಕರಣ ಶೇ.17ರಷ್ಟು ಎಂದು ನಿಗದಿಪಡಿಸಿ ವಿಂಗಡಿಸಲಾಗಿದೆ. ಇದು ಅಸಾಂವಿಧಾನಿಕ ಮತ್ತು ಕಾನೂನುಬಾಹಿರ ಎಂದರು.

ಲಂಬಾಣಿ ಹಾಗೂ ಇತರ 63 ಸಮುದಾಯಗಳಿಗೆ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕವಾಗಿ ಈಗ ನೀಡಿರುವ ಮೀಸಲಾತಿಯಿಂದ ಹಿನ್ನಡೆ ಉಂಟಾಗುತ್ತದೆ. ಈ ಸಮುದಾಯಗಳಲ್ಲಿ ಯಾರೂ ಸಹ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗಗಳಲ್ಲಿ ಉನ್ನತ ಸ್ಥಾನಮಾನ ಹೊಂದಿಲ್ಲ. ಸರ್ಕಾರವು ಈ ಕೂಡಲೇ ವರದಿಯನ್ನು ತಿದ್ದುಪಡಿ ಮಾಡಿ ನಮಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದರು.

ಅಂಬೇಡ್ಕರ್ ವೃತ್ತದಿಂದ ತಾಲೂಕು ಕಚೇರಿವರೆಗೆ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ಬಂಜಾರ ಸಮಾಜದ ಅಧ್ಯಕ್ಷ ಗಂಗಾನಾಯ್ಕ, ಪ್ರಮುಖರಾದ ಲೋಹಿತ್ ನಾಯಕ್, ಮಂಜನಾಯ್ಕ, ರಾಘವೇಂದ್ರ ನಾಯಕ್, ಜಯಾನಾಯಕ್, ಸವಿತಾ ಬಾಯಿ, ವಿಜಯಲಕ್ಷ್ಮೀ ಮಂಜಾನಾಯ್ಕ, ಪರಮೇಶ್ವರ ನಾಯ್ಕ, ಈರಾನಾಯ್ಕ, ರಾಜು ನಾಯ್ಕ, ಮಳವಳ್ಳಿ ಬಾಬು, ಮಲ್ಲೇಶ್ ನಾಯ್ಕ, ಶಿವ್ಯಾನಾಯ್ಕ, ಜಗದೀಶ್ ನಾಯ್ಕ ಇತರರಿದ್ದರು.