ಬೇಲೂರು: ಪರಿಶಿಷ್ಟ ಜಾತಿಯಲ್ಲಿನ ಒಳ ಮೀಸಲಾತಿಗಾಗಿ 30 ವರ್ಷಗಳಿಂದ ನಡೆಸಿದ ಹೋರಾಟಕ್ಕೆ ಕೊನೆಗೂ ನ್ಯಾಯ ದೊರಕಿಸಿ ಕೊಟ್ಟ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಾಲೂಕು ಮಾದಿಗ ದಂಡೋರ ಸಮಿತಿ ಮುಖಂಡ ಭೈರೇಶ್ ಹೇಳಿದರು.
ಪರಿಶಿಷ್ಟ ಜಾತಿಯಲ್ಲಿ ಮಾದಿಗ ಸಮುದಾಯ ಅವಕಾಶ ಹಾಗೂ ಸೌಲಭ್ಯಗಳಿಂದ ವಂಚಿತವಾಗಿತ್ತು. ಈ ಹಿನ್ನೆಲೆಯಲ್ಲಿ ಒಳಮೀಸಲಾತಿಗಾಗಿ 30 ವರ್ಷಗಳಿಂದ ಹೋರಾಟ ನಡೆಸಲಾಗಿತ್ತು. ಈ ವಿಚಾರವಾಗಿ ಸುಪ್ರೀಂಕೋರ್ಟ್ ಸಹ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದ್ದರಿಂದ ರಾಜ್ಯ ಸರ್ಕಾರ ನಿವೃತ್ತ ನ್ಯಾ.ನಾಗಮೋಹನ ದಾಸ್ ಆಯೋಗ ರಚಿಸಿದ್ದರಿಂದ ಅವರು ವಾಸ್ತವ ದತ್ತಾಂಶ ಸಂಗ್ರಹಿಸಿ ವರದಿ ನೀಡಿದ್ದರು. ಇದನ್ನು ಸರ್ಕಾರ ವಿಶೇಷ ಸಂಪುಟ ಸಭೆ ಕರೆದು ಚರ್ಚಿಸಿ ನ್ಯಾಯ ದೊರಕಿಸಿಕೊಟ್ಟಿದ್ದು ಸ್ವಾಗತಾರ್ಹ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯ ಮತ್ತು ಜಿಲ್ಲೆಯಲ್ಲಿ ಎಡ ಮತ್ತು ಬಲ ಸಮುದಾಯದವರು ಸಹೋದರರಂತೆ ಇದ್ದೇವೆ. ನಮ್ಮ ಹಕ್ಕಿಗಾಗಿ ಜತೆಯಲ್ಲೇ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಮುಂದೆಯೂ ಹೀಗೆ ಮುಂದುವರಿಯಲಿದೆ. ಸರ್ಕಾರ ಒಳಮೀಸಲಾತಿಯ ಐತಿಹಾಸಿಕ ತೀರ್ಪು ನೀಡಿದ್ದು ಇದನ್ನು ವಿಜಯೋತ್ಸವದ ಮೂಲಕ ಹಾಸನದಲ್ಲಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲಿದ್ದೇವೆ ಎಂದರು.
ಮಾದಿಗ ದಂಡೋರ ತಾಲೂಕು ಅಧ್ಯಕ್ಷ ಹಾಗೂ ಗ್ರಾಪಂ ಮಾಜಿ ಉಪಾಧ್ಯಕ್ಷ ದಾಸಪ್ಪ ಮಾತನಾಡಿ, ನಮ್ಮ ಸಮುದಾಯಕ್ಕೆ ಮೀಸಲಾತಿಯಲ್ಲಿ ಅನ್ಯಾಯವಾಗಿತ್ತು. ನಮ್ಮ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಇದಕ್ಕೆ ಕಾರಣವಾದ ರಾಜ್ಯ ಸರ್ಕಾರಕ್ಕೆ ಅಭಿನಂದಿಸುತ್ತೇವೆ ಎಂದರು.
ಮುಖಂಡರಾದ ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣ, ಜೇನುಕಲ್ ಉಮೇಶ್ ಇದ್ದರು.