ಜಿಲ್ಲೆ

ಒಳನಾಡು ಸಾರಿಗೆ ಅಧಿಕಾರಿಗಳಿಗೆ ಹಾಲಪ್ಪ ತರಾಟೆ: ವರ್ಷದಿಂದ ಲಾಂಚ್ ಸಿಬ್ಬಂದಿಗೆ ಸಂಬಳ ನೀಡದ್ದಕ್ಕೆ ಸಚಿವರ ಮುಂದೆಯೆ ಕ್ಲಾಸ್

ಸಾಗರ: ಶರಾವತಿ ಹಿನ್ನೀರಿನ ಹೊಳೆಬಾಗಿಲು ಸೇರಿದಂತೆ ಬೇರೆ ಬೇರೆ ಕಡವುಗಳಲ್ಲಿನ ಲಾಂಚ್‌ಗಳಲ್ಲಿ ಅರೆಕಾಲಿಕ ವೃತ್ತಿ ನಡೆಸುತ್ತಿರುವ ಸಿಬ್ಬಂದಿಗೆ ವೇತನ ಪಾವತಿ ಮಾಡದಿರುವ ಕುರಿತು ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆ ಅಧಿಕಾರಿಗಳನ್ನು ಸೋಮವಾರ ಶಾಸಕ ಹರತಾಳು ಹಾಲಪ್ಪ ವಿಧಾನಸೌಧದಲ್ಲಿ ಸಚಿವ ಎಸ್.ಅಂಗಾರ ಅವರ ಸಮ್ಮುಖದಲ್ಲಿ ಫೋನ್ ಮೂಲಕ ತರಾಟೆಗೆ ತೆಗೆದುಕೊಂಡರು.

ಅಧಿಕಾರಿಗಳು ಸರ್ಕಾರಕ್ಕೆ ಮತ್ತು ಚುನಾಯಿತ ಪ್ರತಿಧಿಗಳಿಗೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುತ್ತಿದ್ದಾರೆ. ಈ ಸಮಸ್ಯೆ ಕುರಿತಂತೆ ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.

ಕಳೆದ ಒಂದು ವರ್ಷದಿಂದ ಲಾಂಚ್‌ನಲ್ಲಿ ಅರೆಕಾಲಿಕ ವೃತ್ತಿ ಮಾಡುತ್ತಿರುವ 17ಕ್ಕೂ ಹೆಚ್ಚು ಸಿಬ್ಬಂದಿಗೆ ವೇತನ ಪಾವತಿ ಮಾಡಿಲ್ಲ. ಸಾರ್ವಜನಿಕರು ವೇತನ ಕೊಡಿಸಲು ಪ್ರತಿಭಟನೆ ಮಾಡಿದ್ದಾರೆ. ವೇತನ ಕೊಡದಿರುವ ಬಗ್ಗೆ ಸಿಬ್ಬಂದಿ ನನ್ನ ಗಮನಕ್ಕೂ ತಂದಿಲ್ಲ. ಅವರಿಂದ ಕೆಲಸ ಮಾಡಿಸಿಕೊಂಡು ವೇತನ ಕೊಡಲು ಏಕೆ ಸತಾಯಿಸುತ್ತಿದ್ದಾರೆ. ಸಮಸ್ಯೆಯ ಎಲ್ಲಾ ವಿವರವನ್ನು ಸಚಿವರ ಗಮನಕ್ಕೆ ತಂದರು.

ಶಾಸಕ ಹಾಲಪ್ಪ ಅವರು ಮಾಹಿತಿ ನೀಡುತ್ತಿದ್ದಂತೆ ಸ್ಪಂದಿಸಿದ ಸಚಿವ ಎಸ್.ಅಂಗಾರ, ಸಿಬ್ಬಂದಿಗೆ ವೇತನ ಕೊಡದೆ ಇರುವ ಸಂಗತಿ ನನ್ನ ಗಮನಕ್ಕೆ ಬಂದಿಲ್ಲ. ಇನ್ನು ಎರಡು ದಿನಗಳೊಳಗೆ ಬಾಕಿ ವೇತನ ಬಿಡುಗಡೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.