ಹುಬ್ಬಳ್ಳಿ: ಕೊಳಚೆ ಎಲ್ಲವೂ ಭೂಗತವಾಗಿ ಹರಿದು ನಿಗದಿತ ಸ್ಥಳಕ್ಕೆ ಹೋಗಲೆಂದು ಆಧುನಿಕ ಬಡಾವಣೆಗಳಲ್ಲಿ ಒಳಚರಂಡಿ ವ್ಯವಸ್ಥೆ ಮಾಡಲಾಗುತ್ತದೆ. ಆದರೆ, ಇಲ್ಲಿಯ ನವನಗರ ಬಳಿಯ ಗಂಗಾಧರನಗರ ಹಾಗೂ ಕೀರ್ತನಾ ಪಾರ್ಕ್ನಲ್ಲಿ ಇದು ಸಂಪೂರ್ಣ ತದ್ವಿರುದ್ಧವಾಗಿದೆ. ಒಳಚರಂಡಿ ಕೊಳಚೆ ಹೊರಗಡೆ ಹರಿಯುತ್ತದೆ.
ಇದರ ಪರಿಣಾಮವಾಗಿ ಅಕ್ಕಪಕ್ಕದ ಬಡಾವಣೆ ನಿವಾಸಿಗಳು ಸಮಸ್ಯೆ ಎದುರಿ ಸುತ್ತಿದ್ದಾರೆ. ಒಳಚರಂಡಿ ಕೊಳಚೆ ಎಲ್ಲೆಂದರಲ್ಲಿ ಹರಿದು ಬದುಕು ಬರ್ಬರವಾಗಿಸಿದೆ. ಖಾಲಿ ನಿವೇಶನ, ರಸ್ತೆಗಳೇ ಒಳಚರಂಡಿ ಕೊಳಚೆಗೆ ನಿಲ್ದಾಣವಾಗಿವೆ. ನವನಗರ ಬಳಿಯ (ಗಾಮನಗಟ್ಟಿ ರಸ್ತೆ) ಕೀರ್ತನಾ ಪಾರ್ಕ್ ಸ್ಟೇಜ್ 1 ಹಾಗೂ 2ರಲ್ಲಿ ಒಳಚರಂಡಿ ಅವ್ಯವಸ್ಥೆ ಹೇಳತೀರದಾಗಿದೆ. ಇಲ್ಲಿಯ ಬಹುತೇಕ ಖಾಲಿ ನಿವೇಶನಗಳು ಕೊಳಚೆಯಿಂದ ತುಂಬಿಕೊಂಡಿವೆ.
ಏನಿದು ಸಮಸ್ಯೆ?: ಕೀರ್ತನಾ ಪಾರ್ಕ್ ಮೇಲ್ಗಡೆ ಇರುವ ಗಂಗಾಧರನಗರದಲ್ಲಿ ಸೆಫ್ಟಿಕ್ ಟ್ಯಾಂಕ್ ಇದ್ದು, ಅದು ಭರ್ತಿಯಾದಾಗ ನೀರು ಹರಿಯಲು ಒಂದು ಮೂಲೆಯಲ್ಲಿ ಒಡೆಯಲಾಗಿದೆ. ಆಗಿನಿಂದ ಒಳಚರಂಡಿ ಕೊಳಚೆ ಹೊರಗೆ ಹರಿಯಲು ಆರಂಭಿಸಿ ಮುಂದೆ ಬಡಾವಣೆಗಳ ರಸ್ತೆ, ಖಾಲಿ ನಿವೇಶನಕ್ಕೆ ನುಗ್ಗುತ್ತಿದೆ. ಈ ಅವ್ಯವಸ್ಥೆ ಶುರುವಾಗಿ ನಾಲ್ಕು ವರ್ಷವಾದರೂ ಇದನ್ನು ಸರಿಪಡಿಸುವ ಪ್ರಯತ್ನವಾಗಿಲ್ಲ.
ಕಲುಷಿತ ನೀರು ಹರಿಯಲು ಮಾರ್ಗವೇ ಇರದ ಸಮಯದಲ್ಲಿ ಅಂದಿನ ಪಾಲಿಕೆ ಸದಸ್ಯರೊಬ್ಬರು ಖಾಸಗಿ ನಿವೇಶನಗಳಲ್ಲೇ ಯಂತ್ರಗಳ ಮೂಲಕ ದಾರಿ ಮಾಡಿ ಕೊಟ್ಟಿದ್ದಾರೆ. ಈಗ ಆ ನಿವೇಶನಗಳ ಮಾಲೀಕರು ಮನೆ ಕಟ್ಟಿಕೊಳ್ಳಲು ಪರದಾಡುವಂತಾಗಿದೆ. ಅಂದು ಅನಿವಾರ್ಯವಾಗಿ ಒಳಚರಂಡಿ ಕೊಳಚೆಗೆ ಖಾಸಗಿ ನಿವೇಶನಗಳಲ್ಲಿ ದಾರಿ ಮಾಡಿಕೊಡಲಾಗಿದೆ. ಈಗ ಇದಕ್ಕೆ ಶಾಶ್ವತ ಪರಿಹಾರ ಅಗತ್ಯವಾಗಿದೆ.
ಸೆಫ್ಟಿಕ್ ಟ್ಯಾಂಕ್ ತುಂಬಿ ಕೊಳಚೆ ನೀರು ಮುಕ್ತವಾಗಿ ಹರಿಯುತ್ತಿರುವುದರಿಂದ ಸುತ್ತಲಿನ ವಾತಾವರಣ ಹದಗೆಟ್ಟಿದೆ. ಖಾಲಿ ನಿವೇಶನ, ರಸ್ತೆಯಲ್ಲಿ ಸಂಗ್ರಹವಾಗುತ್ತಿರುವುದರಿಂದ ಇನ್ನಷ್ಟು ಅಸಹನೀಯವಾಗಿದೆ. ಜತೆಗೆ ಅನಾರೋಗ್ಯದ ಭಯ ಒಂದೆಡೆಯಾದರೆ ವಿಷ ಜಂತುಗಳ ಕಾಟವೂ ಇಲ್ಲಿನ ಜನರನ್ನು ಕಾಡುತ್ತಿದೆ.ಗಂಗಾಧರ ನಗರ ಹಾಗೂ ಕೀರ್ತನಾ ಪಾರ್ಕ್ ಒಳಚರಂಡಿ ಸಮಸ್ಯೆ ನಮ್ಮ ಗಮನಕ್ಕೆ ಬಂದಿದೆ. ಪರಿಹಾರದ ಕುರಿತು ಪಾಲಿಕೆ ಆಯುಕ್ತರೊಂದಿಗೆ ರ್ಚಚಿಸಲಾಗಿದೆ. ಅಂದಾಜು ಪತ್ರಿಕೆ ತಯಾರಿಸಲು ಆಯುಕ್ತರು ಹೇಳಿದ್ದು, ಆ ಕಾರ್ಯ ನಡೆಯುತ್ತಿದೆ.| ರಮೇಶ ನೂಲ್ವಿ ಸಹಾಯಕ ಆಯುಕ್ತರು, ವಲಯ ಕಚೇರಿ 4