ಜಿಲ್ಲೆ

ಒಳ ಮೀಸಲು ಜಾರಿಗೆ ದಸಂಸ ಆಗ್ರಹ

ಚಿತ್ರದುರ್ಗ: ಒಳಮೀಸಲು ಅನುಷ್ಠಾನಕ್ಕೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ‌್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಪರಿಶಿಷ್ಟರ ಮೀಸಲಾತಿ, ಸಮುದಾಯದ 101 ಜಾತಿಗಳಲ್ಲಿ ಸಮನಾಗಿ ಹಂಚಿಕೆಯಾಗಿಲ್ಲ. ಆದ್ದರಿಂದ ಒಳ ಮೀಸಲು ಜಾರಿಗೆ ಒತ್ತಾಯಿಸಿ ಮೂರು ದಶಕಗಳಿಂದ ನಿರಂತರ ಹೋರಾಟಗಳಾಗಿವೆ. ಒಳಮೀಸಲು ಜಾರಿ ಅಧಿಕಾರ ರಾಜ್ಯಗಳಿಗೆ ಇದೆ ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ ಎಂದರು.
ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ ಸರ್ಕಾರಗಳು ಪರಿಶಿಷ್ಟರ ಮೀಸಲು ವರ್ಗೀಕರಣಕ್ಕೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದು ಸ್ಮರಣೀಯ. ಜತೆಗೆ ರಾಜ್ಯ ಸರ್ಕಾರ ಕೂಡಲೇ ಒಳಮೀಸಲು ಜಾರಿಗೊಳಿಸಲು ಮುಂದಾಗಬೇಕೆಂದು ಆಗ್ರಹಿಸಿದರು.
ತೀರ್ಪು ಬಂದು 40 ದಿನಗಳಾದರೂ ರಾಜ್ಯ ಸರ್ಕಾರ ದೃಢ ನಿಲುವು ಕೈಗೊಳ್ಳದಿರುವುದು ಬೇಸರ ತರಿಸಿದೆ. ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯಂತೆ ಒಳಮೀಸಲಾತಿ ಅನುಷ್ಠಾನ ಮಾಡಬೇಕು. ಸಾಮಾನ್ಯ ಯೋಜನೆಗೆ ಬಳಸಿರುವ 2023-24 ಮತ್ತು 2024-2025ನೇ ಸಾಲಿನಲ್ಲಿ 25,391 ಸಾವಿರ ಕೋಟಿ ರೂ. ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನವನ್ನು ಎಸ್ಸಿ, ಎಸ್ಟಿ ಅಭಿವೃದ್ಧಿಗೆ ಹಿಂತಿರುಗಿಸಬೇಕು. ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ವಿದ್ಯಾರ್ಥಿ ವೇತನ ನೀಡಬೇಕು. ವಿದೇಶ ಶಿಕ್ಷಣದ ಪ್ರಬುದ್ಧ ಯೋಜನೆ ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಮೀಸಲು ವರ್ಗೀಕರಣವಾಗುವವರೆಗೂ ನೇಮಕಾತಿಗಳನ್ನು ಸ್ಥಗಿತಗೊಳಿಸಬೇಕು. ಖಾಸಗಿ ಮತ್ತು ಗುತ್ತಿಗೆ ನೇಮಕಗಳಲ್ಲೂ ಮೀಸಲಾತಿ ನೀಡಬೇಕು. ಕೇಂದ್ರ ಸರ್ಕಾರ ಕೂಡಲೇ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ಅಭಿವೃದ್ಧಿಗಾಗಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆ ಜಾರಿಗೊಳಿಸಿ, ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಅನುದಾನ ಕಾಯ್ದಿರಿಸಬೇಕೆಂದು ಆಗ್ರಹಿಸಿದರು.
ಸಾಹಿತಿ ಆನಂದಕುಮಾರ್, ರಾಜ್ಯ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಕುಂಚಿಗನಾಳ್ ಮಹಾಲಿಂಗಪ್ಪ, ಜಿಲ್ಲಾಧ್ಯಕ್ಷ ಎಸ್.ಎನ್.ವಿಶ್ವನಾರಾಯಣಮೂರ್ತಿ, ನೇಹಮಲ್ಲೇಶ್, ಕೆ.ನಾಗಭೂಷಣ್, ಪ್ರದೀಪ್, ಪ್ರಭಾಕರ್, ಚನ್ನಬಸವ, ಕಣ್ಮೇಶ್ ಕಲ್ಲಾಹಟ್ಟಿ, ಶ್ರೀಹರಿ, ಇಮ್ರಾನ್‌ಬೇಗ್, ತಿಪ್ಪೇಸ್ವಾಮಿ ಮತ್ತಿತರರು ಇದ್ದರು.