ಅರಕಲಗೂಡಿನಲ್ಲಿ ಶನಿವಾರ ಆಯೋಜಿಸಿದ್ದ ಮಾದಿಗರ ಏಕತಾ ಸಮಾವೇಶ ಹಾಗೂ ಮತದಾನ ಜಾಗೃತಿ ಅಭಿಯಾನ, ಒಳ ಮೀಸಲಾತಿಗಾಗಿ ಒತ್ತಾಯ, ಆದಿ ಜಾಂಬವ ಜಯಂತ್ಯುತ್ಸವ ಕಳಸೋತ್ಸವ ಮೆರವಣಿಗೆ ವೈಭವದಿಂದ ನಡೆಯಿತು. 
ಜಿಲ್ಲೆ

ಒಳ ಮೀಸಲಾತಿ ವರ್ಗೀಕರಣ ಜಾರಿಗೆ ಒತ್ತಡ ತರುವೆ

ಅರಕಲಗೂಡು: ಸಂವಿಧಾನದ ಹಕ್ಕುಗಳನ್ನು ಬಳಸಿಕೊಂಡು ಮಂತ್ರಿಗಳಾದರೂ ಸಮುದಾಯದ ಉದ್ದಾರವಾಗಿಲ್ಲ. ಅಧಿಕಾರ ಪಡೆದ ರಾಜಕೀಯ ಪಕ್ಷಗಳ ಕೊಡುಗೆ ಶೂನ್ಯವಾಗಿದೆ. ಮಾದಿಗ ಸಮುದಾಯದ ಬಹು ಬೇಡಿಕೆಯಾದ ಒಳ ಮೀಸಲಾತಿ ವರ್ಗೀಕರಣ ಜಾರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವುದಾಗಿ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಕರ್ನಾಟಕ ಮಾದಿಗ ದಂಡೋರ, ಮಾದಿಗ ಮೀಸಲಾತಿ ಹೋರಾಟ ಸಮಿತಿ ಶನಿವಾರ ಆಯೋಜಿಸಿದ್ದ ಮಾದಿಗರ ಐಕ್ಯತಾ ಸಮಾವೇಶ ಹಾಗೂ ಮತದಾನ ಜಾಗೃತಿ ಅಭಿಯಾನ, ಒಳ ಮೀಸಲಾತಿಗಾಗಿ ಒತ್ತಾಯ, ಆದಿ ಜಾಂಬವ ಜಯಂತ್ಯುತ್ಸವ ಮತ್ತು 1001 ಕಳಸೋತ್ಸವ ಮೆರವಣಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾದಿಗ ಸಮುದಾಯ ಕಟ್ಟ ಕಡೆಯ ಸಮುದಾಯವಾಗಿದೆ. ಸರ್ಕಾರದ ಕೆಲವು ಸವಲತ್ತುಗಳಿಂದ ವಂಚಿತವಾಗಿದೆ. ಸದಾಶಿವ ಆಯೋಗ ಮೀಸಲಾತಿ ಹಂಚಿಕೆ ಕುರಿತಂತೆ ಸರ್ಕಾರಕ್ಕೆ ವರದಿ ಸಲ್ಲಿಸಿ ಐದು ವರ್ಷಗಳಾದರೂ ಸರ್ಕಾರಗಳು ಜಾರಿಗೊಳಿಸುವಲ್ಲಿ ವಿಫಲವಾಗಿವೆೆ ಎಂದರು.

ಪೌರ ಕಾರ್ಮಿಕರಿಗೆ ಮನೆಯ ಹಕ್ಕು ಪತ್ರಗಳನ್ನು ನನ್ನ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ. ಬಿಜೆಪಿ ಸರ್ಕಾರ ಈ ಸಮುದಾಯಕ್ಕೆ ಹಲವಾರು ಸೌಲಭ್ಯ ನೀಡುವ ಮೂಲಕ ನಮ್ಮ ಕೈ ಹಿಡಿದು ನಡೆಸಿದೆ. ನರೇಂದ್ರ ಮೋದಿ ಅವರ ಸಚಿವ ಸಂಪುಟದಲ್ಲಿ ನನಗೆ ಮಾನ್ಯತೆ ನೀಡಿರುವುದು ನನ್ನ ಭಾಗ್ಯ ಎಂದು ಹೇಳಿದರು.

ಶತಮಾನಗಳಿಂದ ಸ್ವಾಮೀಜಿಗಳಿದ್ದು, ಅವರ ಆಶೀರ್ವಾದ ಮೇಲ್ವರ್ಗದವರಿಗೆ ಸಿಗುತ್ತಿತ್ತು. ಅವರಿಗೆ ಶಿಕ್ಷಣ ಜ್ಞಾನವಿತ್ತು. ಆದರೆ ಮಾದಿಗ ಸಮುದಾಯ ತುಳಿತಕ್ಕೆ ಒಳಗಾಗಿತ್ತು. ಯಾವ ಸಂತರ ಆಶೀರ್ವಾದವೂ ಇರಲಿಲ್ಲ. ಈ ಸಮುದಾಯ ಮಕ್ಕಳಿಗೆ ಹೆಚ್ಚು ಶಿಕ್ಷಣ ಕೊಡಿಸಬೇಕಿದೆ ಎಂದು ಹೇಳಿದರು.

ರಾಜಕೀಯ ಪಕ್ಷಗಳ ಕೊಡುಗೆ ಶೂನ್ಯ: ದೇಶಕ್ಕೆ ಸ್ವತಂತ್ರ್ಯ ಬಂದು 76 ವರ್ಷ, ಸಂವಿಧಾನ ಜಾರಿಗೆ ಬಂದು 73 ವರ್ಷವಾಗಿದೆ. ಆದರೆ ನಮಗೆ ಕೊಟ್ಟ ಮೀಸಲಾತಿ ಬಗ್ಗೆ ಅನುಮಾನ ಬಂದಿದೆ. ಶೋಷಿತ ವರ್ಗದ ದಾರಿ ದೀಪವಾಗಲಿಲ್ಲ. ಬದುಕಿಗೆ ಆಧಾರವಾಗಲಿಲ್ಲ. ಹಲವಾರು ಬಾರಿ ಎಲ್ಲ ಚುನಾವಣೆಗಳಲ್ಲಿ ಮತ ಹಾಕಿದರೂ ಸಮುದಾಯದ ಉದ್ದಾರ ಆಗಲಿಲ್ಲ. ಈ ಶೋಷಿತ ವರ್ಗಕ್ಕೆ ಸಾಮಾಜಿಕ ನ್ಯಾಯ, ಆರ್ಥಿಕ ಭದ್ರತೆ ಸಿಗಲಿಲ್ಲ. ಉನ್ನತ ಶಿಕ್ಷಣಕ್ಕೆ ದಲಿತರ ಮಕ್ಕಳು ಕಡಿಮೆ ಪ್ರವೇಶ ಆಗುತ್ತಿದೆ. ಅಧಿಕಾರ ಪಡೆದ ರಾಜಕೀಯ ಪಕ್ಷಗಳ ಕೊಡುಗೆ ಶೂನ್ಯವಾಗಿದೆ. ಕ್ಷೇತ್ರಗಳಲ್ಲಿ ಬದ್ಧತೆ ಇಲ್ಲದ ರಾಜಕಾರಣವಾಗಿದೆ ಎಂದು ಕಿಡಿಕಾರಿದರು.
ಮಾದಿಗ ಸಮುದಾಯದವರದು ಇಂದಿಗೂ ಗುಲಾಮಗಿರಿ ಜೀವನವಾಗಿದೆ. ಸಂವಿಧಾನದ ಹಕ್ಕುಗಳನ್ನು ಬಳಸಿಕೊಂಡು ಮಂತ್ರಿಗಳಾದರೂ ಸಮುದಾಯದ ಉದ್ದಾರ ಆಗಿಲ್ಲ. ಭೂಮಿ ಯಾರ ಸ್ವತ್ತಲ್ಲ, ಒಂದು ವರ್ಗಕ್ಕೆ ಮೀಸಲಲ್ಲ. ನಮಗೂ ಅಧಿಕಾರವಿದೆ. ಸಂಪತ್ತನ್ನು ಶೋಷಿತ ವರ್ಗಕ್ಕೆ ಹಂಚಲಿಲ್ಲ. ನಾವೂ ಜಾಗೃತವಾಗಿಲ್ಲ. ನಾನು ಈ ಸಮಾಜದ ಉದ್ದಾರಕ್ಕಾಗಿ ನನ್ನ ಜೀವ ಇರುವವರೆಗೆ ವರ್ಗಿಕರಣಕ್ಕಾಗಿ ಹೋರಾಟ ಮಾಡುತ್ತೇನೆ. ಸಮುದಾಯವನ್ನು ಮೇಲೇತ್ತಲು ಶ್ರಮಿಸುತ್ತೇನೆ. ನಮಗೆ ದ್ರೋಹ ಮಾಡುವ ರಾಜಕಾರಣಿಗಳಿಗೆ ಸರಿಯಾದ ಪಾಠ ಕಲಿಸಬೇಕಿದೆ ಎಂದರು.

ಚಿತ್ರದುರ್ಗ ಮಠದ ಶ್ರೀಬಸವಮೂರ್ತಿ ಮಾದರಚನ್ನಯ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಸಮುದಾಯದಲ್ಲಿ ಶಿಕ್ಷಣ ಮತ್ತು ಆರ್ಥಿಕ ಉನ್ನತಿ ಪ್ರಬಲವಾಗಿದ್ದರೆ ಮುಖ್ಯವಾಹಿನಿಗೆ ಬರಬಹುದು. ಶೈಕ್ಷಣಿಕವಾಗಿ ಮತ್ತು ಕೃಷಿಯಲ್ಲಿ ಪ್ರಗತಿ ಸಾಧಿಸಲು ಚಿಂತನೆ ಮಾಡಬೇಕು. ಕಳೆದ 70 ವರ್ಷಗಳಿಂದ ನಾವು ಶಿಕ್ಷಣದಲ್ಲಿ ಹಿಂದುಳಿದ್ದರಿಂದ ಮೀಸಲಾತಿ ಸವಲತ್ತುಗಳನ್ನು ಭಳಸಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಶಿಕ್ಷಣದಲ್ಲಿ ನಮ್ಮ ಸಾದನೆ ಶೂನ್ಯ. ಮುಂದಿನ ದಿನಗಳಲ್ಲಿ ಪ್ರತಿ ಮನೆಯಲ್ಲಿ ಒಬ್ಬರು ಸರ್ಕಾರಿ ನೌಕರಿ ಪಡೆದರೆ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ಕರೆ ನೀಡಿದರು.

ಯಾವ ಸಮಾಜ ದುರ್ಗುಣ, ದುಶ್ಚಟಗಳನ್ನು ತೊಡೆದುಹಾಕಿ ಉತ್ತಮ ಗುಣಗಳನ್ನು ಪಾಲಿಸಿಕೊಳ್ಳುತ್ತದೋ ಆ ಸಮುದಾಯ ಮುಂದುವರಿಯುತ್ತದೆ. ನಮ್ಮ ಸಮಾಜದವರು ಕೃಷಿಯಲ್ಲಿ ಪ್ರಗತಿ ಕಾಣಬೇಕು. ರಾಜ್ಯದ ಹಲವು ಕಡೆಗಳಲ್ಲಿ ನಮ್ಮ ಮಠಗಳನ್ನು ನಿರ್ಮಿಸಲಾಗುತ್ತಿದ್ದು, ಇದಕ್ಕೆ ಗೋವಿಂದ ಕಾರಜೋಳ ಮತ್ತು ನಾರಾಯಣಸ್ವಾಮಿ ಅವರು ಮುಖ್ಯ ಕಾರಣ ಎಂದರು.

ಒಳ ಮೀಸಲಾತಿ ಶೀಘ್ರದಲ್ಲೇ ಅಂತ್ಯ: ಒಳ ಮೀಸಲಾತಿಯೂ ನಾರಾಯಣಸ್ವಾಮಿ ಅವರ ಹೋರಾಟದಿಂದ ಬಂದಿದ್ದು, ಶೀಘ್ರವಾಗಿ ಅಂತ್ಯವಾಗಲಿದೆ. ಎಲ್ಲ ಸಮುದಾಯದವರ ಜತೆ ಹೊಂದಿಕೊಂಡು ಸ್ನೇಹ ಭಾವದಿಂದ ಯಾವ ಸಮುದಾಯದ ಜತೆ ಜಗಳ ಮಾಡದೆ ಅನ್ಯೂನ್ಯತೆಯಿಂದ ಜೀವನ ಸಾರ್ಥಕತೆ ಮಾಡಿಕೊಳ್ಳಿ ಎಂದು ಮನವಿ ಮಾಡಿದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಕಳಸೋತ್ಸವ ಮೆರವಣಿಗೆಯು ತಾಲೂಕು ಕಚೇರಿಗೆ ತೆರಳಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಕಾರ್ಯಕ್ರಮ ನಡೆಯುವ ತಾಲೂಕು ಕ್ರೀಡಾಂಗಣಕ್ಕೆ ಆಗಮಿಸಿತು. ಬಿಜೆಪಿ ಮುಖಂಡರಾದ ಸಿ.ಡಿ.ದಿವಾಕರ್‌ಗೌಡ, ದರ್ಶನ್, ನಿಂಗರಾಜು, ರಾಜಶೇಖರ್, ಜಿಪಂ ಮಾಜಿ ಅಧ್ಯಕ್ಷೆ ವತ್ಸಲಾ ಶೇಖರಪ್ಪ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವಿಶ್ವನಾಥ್, ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ಚಂದ್ರು, ಶಿವಮ್ಮ, ಪ್ರಕಾಶ್, ಮನು ಸಿದ್ದಾರ್ಥ್, ಲಕ್ಷ್ಮೀ ಇತರರಿದ್ದರು.

.