ಚಿಕ್ಕಮಗಳೂರು: ಸುಪ್ರೀಂ ಕೋರ್ಟಿನ ತೀರ್ಪಿನಂತೆ ಒಳ ಮೀಸಲಾತಿ ಜಾರುವ ಮಾಡುವ ದಿಕ್ಕಿನಲ್ಲಿ ಕರ್ನಾಟಕ ಸಚಿವ ಸಂಪುಟ ಕೈಗೊಂಡಿರುವ ನಿರ್ಣಯವನ್ನು ಸ್ವಾಗತಿಸುತ್ತೇವೆ. ಆದರೆ ದತ್ತಾಂಶ ಸಂಗ್ರಹಣೆ ನೆಪವೊಡ್ಡಿ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಮತ್ತೊಂದು ಆಯೋಗ ರಚಿಸಿರುವುದು ಅನಾವಶ್ಯಕ. ಇದು ಕಾಲಹರಣ ಮಾಡುವ ತಂತ್ರವಾಗಿದೆ ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಆರೋಪಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಕಾಲಹರಣ ಮಾಡದೆ ಒಳ ಮೀಸಲಾತಿಯನ್ನು ಕೂಡಲೇ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯ ವಿವಿಧ ಉಪಜಾತಿಗಳ ಜನಸಂಖ್ಯೆಗೆ ಸಂಬAಧಪಟ್ಟ ಮಾಹಿತಿ ಹಾವನೂರು ಆಯೋಗದಿಂದ ಮೊದಲ್ಗೊಂಡು, ನ್ಯಾಯಮೂರ್ತಿ ಸದಾಶಿವ ಆಯೋಗ, ಕಾಂತರಾಜ್ ಆಯೋಗ, ನಾಗಮಹಂತ ಆಯೋಗ ಹಾಗೂ ಜೆ.ಸಿ. ಮಾಧುಸ್ವಾಮಿ ಸಮಿತಿಗಳು ನೀಡಿದ ವರದಿಯಲ್ಲಿ ಲಭ್ಯವಿದೆ. ಈ ವರದಿಗಳನ್ನು ಪರಿಗಣಿಸಿ ಸಮಸ್ಯೆ ಬಗೆಹರಿಸಲು ಸಾಧ್ಯವಿತ್ತು. ೩೦ ವರ್ಷಗಳ ಹಿಂದೆಯೇ ಒಳ ಮೀಸಲಾತಿಗೆ ಸಂಬAಧಪಟ್ಟ ಸಮಸ್ಯೆಗಳು ಸರ್ಕಾರದ ಗಮನಕ್ಕೆ ಬಂದ ಕೂಡಲೇ ಅದನ್ನು ಬಗೆಹರಿಸಬಹುದಿತ್ತು. ಆದರೆ ಈ ಸಮಸ್ಯೆಯನ್ನು ಜೀವಂತವಾಗಿ ಇಟ್ಟು, ನೂರೊಂದು ಜಾತಿಗಳ ಮಧ್ಯೆ ಅಪನಂಬಿಕೆ ಉಂಟು ಮಾಡಿ ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಕುತಂತ್ರ ನಡೆಸಿದವು ಎಂದು ದೂರಿದರು.
ದೇಶದಲ್ಲಿ ಸರ್ಕಾರಿ ಹುದ್ದೆಗಳ ಖಾಸಗಿಕರಣದಿಂದಾಗಿ ಸರ್ಕಾರಿ ವಲಯದಲ್ಲಿ ಶೇ. ೧ರಷ್ಟು ಮಾತ್ರ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ಇನ್ನುಳಿದ ಶೇ. ೯೯ರಷ್ಟು ಉದ್ಯೋಗಾವಕಾಶಗಳು ಖಾಸಗಿ ವಲಯದಲ್ಲಿ ಸೃಷ್ಟಿಯಾಗುತ್ತಿವೆ. ಇಂಥ ಪರಿಸ್ಥಿತಿಯಲ್ಲಿ ಖಾಸಗಿ ವಲಯದಲ್ಲಿಯೂ ಎಸ್‌ಸಿ, ಎಸ್‌ಟಿ, ಒಬಿಸಿಗಳು ಮೀಸಲಾತಿ ಪಡೆಯಬೇಕಾಗಿರುವುದು ಅನಿವಾರ್ಯವಾಗಿದೆ. ಇದಕ್ಕಾಗಿ ಎಲ್ಲರೂ ಸೇರಿ ಒಂದುಗೂಡಿ ಹೋರಾಟ ಮಾಡುವುದು ಇಂದಿನ ಅಗತ್ಯವಾಗಿದೆ ಎಂದರು.
ಪರಿಶಿಷ್ಟ ಜಾತಿ ಹಾಗೂ ಪಂಗಡದAತೆ ಅತಿ ಹಿಂದುಳಿದ ವರ್ಗಗಳಿಗೆ ಮೀಸಲಾತಿಯ ಪ್ರಮಾಣದಲ್ಲಿ ಅನ್ಯಾಯವಾಗಿದೆ. ಹೀಗಾಗಿ ಮೇಲ್ಜಾತಿಗಳ ಒತ್ತಡಕ್ಕೆ ಮಣಿಯದೆ ರಾಜ್ಯ ಸರ್ಕಾರವು ಕೂಡಲೇ ಕಾಂತರಾಜ ವರದಿಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳನ್ನು ನೀಡಿ ಬಡವರನ್ನು ಬಡವರನ್ನಾಗಿಯೇ ಇಡುವ ಕೆಲಸ ಮಾಡುತ್ತಿದೆ. ಗ್ಯಾರಂಟಿ ನೀಡುವ ಬದಲು ಜನರಿಗೆ ಹಕ್ಕು ಪತ್ರಗಳನ್ನು ನೀಡಬೇಕು. ನಿವೇಶನ ರಹಿತರಿಗೆ ನಿವೇಶನ ನೀಡಬೇಕು. ಉತ್ತರ ಪ್ರದೇಶ ಹಾಗೂ ಬಿಹಾರ ಹೊರತುಪಡಿಸಿದರೆ ಕರ್ನಾಟಕದಲ್ಲಿಯೇ ಅಟ್ರಾಸಿಟಿ ಪ್ರಕರಣಗಳು ಹೆಚ್ಚುತ್ತಿದ್ದು, ಈ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಜಿಲ್ಲಾ ಸಂಚಾಲಕ ಚಂದ್ರಪ್ಪ, ರಾಜ್ಯ ಸಂಚಾಲಕ ತಿರುಪತಿಹಳ್ಳಿ ದೇವರಾಜು, ಪ್ರಮುಖರಾದ ರಮೇಶ್, ರೇವಣ್ಣ, ಟಿ.ಆರ್.ವಿಜಯಕುಮಾರ್ ಉಪಸ್ಥಿತರಿದ್ದರು.