ತಿ.ನರಸೀಪುರ: ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮಾ.21ರಂದು ಮಾದಿಗರ ಒಳ ಮೀಸಲಾತಿ ಹೋರಾಟದ ಕ್ರಾಂತಿಕಾರಿ ಸಮಾವೇಶ ಹಾಗೂ ಬೆಂಗಳೂರು ಚಲೋ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಡಾ.ಬಾಬು ಜಗಜೀವನ ರಾಂ ಜನ ಕಲ್ಯಾಣ ಸಂಘದ ಅಧ್ಯಕ್ಷ ಮಲಿಯೂರು ಡಿ.ಶಂಕರ್ ಹೇಳಿದರು.
ಪಟ್ಟಣದ ಲೋಕೋಪಯೋಗಿ ಅತಿಥಿ ಗೃಹದಲ್ಲಿ ಗುರುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ನೀಡಬೇಕೆಂದು ಪಟ್ಟು ಹಿಡಿದಿರುವ ಬಿ.ಆರ್.ಭಾಸ್ಕರ್ ಪ್ರಸಾದ್ ನೇತೃತ್ವದ ಮಾದಿಗರ ಒಳ ಮೀಸಲಾತಿ ಹೋರಾಟ ಸಮಿತಿ ಹರಿಹರದ ಪ್ರೊ.ಬಿ.ಕೃಷ್ಣಪ್ಪ ಅವರ ಸಮಾಧಿಯಿಂದ ಫ್ರೀಡಂ ಪಾರ್ಕ್‌ವರೆಗೆ ಪಾದಯಾತ್ರೆ ಹಮ್ಮಿಕೊಂಡಿದೆ. ಒಳ ಮೀಸಲು ಜಾರಿಯಾಗಬೇಕೆಂದು ಮೂರೂವರೆ ದಶಕದಿಂದಲೂ ಹೋರಾಟ ಮಾಡುತ್ತಿದ್ದೇವೆ. ನೆರೆಯ ಹರಿಯಾಣ, ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಒಳ ಮೀಸಲು ಜಾರಿಯಲ್ಲಿದೆ. ಒಳ ಮೀಸಲಾತಿ ಜಾರಿಗೆ ಸುಪ್ರೀಂಕೋರ್ಟ್ ಸಹಮತ ವ್ಯಕ್ತಪಡಿಸಿದರೂ ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ತಾಲೂಕಿನಿಂದ ಐದು ಸಾವಿರಕ್ಕೂ ಹೆಚ್ಚು ಸಮುದಾಯ ಜನರು ಭಾಗವಸಲಿದ್ದೇವೆ. ಶ್ರೀ ಗುಂಜಾ ನರಸಿಂಹಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ತಾಲೂಕು ಕಚೇರಿ ಮುಂಭಾಗವಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬೆಂಗಳೂರಿಗೆ ತೆರಳಿದ್ದೇವೆ ಎಂದು ತಿಳಿಸಿದರು.
ಬನ್ನೂರು ಪುರಸಭೆ ಸದಸ್ಯ ಶಿವಣ್ಣ, ಗ್ರಾಪಂ ಅಧ್ಯಕ್ಷ ಸಿ.ನಿಂಗರಾಜು, ಉಪಾಧ್ಯಕ್ಷ ರೇವಣ್ಣ, ಸದಸ್ಯರಾದ ಕಳ್ಳಿಪುರ ಶಿವಪ್ರಸಾದ್, ಶಿವರಾಜು, ಒಳ ಮೀಸಲಾತಿ ಹೋರಾಟ ಸಮಿತಿ ಸಂಚಾಲಕ ಎಚ್.ನಾಗರಾಜ್, ಮುಖಂಡರಾದ ಹೆಗ್ಗೂರು ಕೆಂಪಣ್ಣ, ಉಮೇಶ್, ಗೋಪಾಲಪುರ ರಾಜಣ್ಣ, ತಬಲಮೂರ್ತಿ, ಮಹದೇವು, ರಜನಿರಾಜ್, ಹ್ಯಾಕನೂರು ಬಸವರಾಜ್, ತೀರ್ಥಹಳ್ಳಿ ಲಿಂಗರಾಜ್, ನರೀಪುರ ರಾಚಪ್ಪ ಇದ್ದರು.