ಜಿಲ್ಲೆ

ಒಮ್ಮೆಯಾದ್ರೂ ಪತಿಯನ್ನು ಗೆಲ್ಲಿಸ್ರಪ್ಪ…

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ತಾಲೂಕಿನಲ್ಲಿ ಜೆಡಿಎಸ್ ಬೂತ್‌ಮಟ್ಟದಿಂದ ಗಟ್ಟಿಯಾಗಿದ್ದರೂ ಮೂರು ಚುನಾವಣೆಗಳಲ್ಲಿ ವಿವಿಧ ಕಾರಣಗಳಿಂದ ಸೋಲನುಭವಿಸಿದೆ. ಮೂರು ಬಾರಿ ಸೋಲುಂಡಿರುವ ಜೆಡಿಎಸ್ ಕಾರ್ಯಕರ್ತರು ಈ ಬಾರಿ ಗೆಲುವಿನ ನಗಾರಿ ಬಾರಿಸಲು ಸಜ್ಜಾಗಿದ್ದಾರೆ. ಒಂದೆಡೆ ದಳಪತಿಗಳ ನಾಯಕರೆಲ್ಲರೂ ಒಗ್ಗಟ್ಟಾಗಿದ್ದರೆ ಮತ್ತೊಂದೆಡೆ ತಾಲೂಕಿನಲ್ಲಿ ಜೆಡಿಎಸ್ ಪರ ಅಭ್ಯರ್ಥಿ ಪತ್ನಿ ಪದ್ಮಾವತಿ ಬಿ.ಮುನೇಗೌಡ ಅವರ ಮತಯಾಚನೆಯ ಶೈಲಿಗೆ ಮತದಾರರಲ್ಲಿ ಅನುಕಂಪ ಸೃಷ್ಟಿಯಾಗುತ್ತಿದೆ.
ಸೆರಗೊಡ್ಡಿ ಮತಭಿಕ್ಷೆ ಕೇಳುವ ಪದ್ಮಾವತಿ: ಪದ್ಮಾವತಿ ಅವರು ಕ್ಷೇತ್ರದ ಮತದಾರರ ಬಳಿ ಕಣ್ಣೀರಿಟ್ಟು, ಸೆರಗೊಡ್ಡಿ ಮತಭಿಕ್ಷೆ ಬೇಡುತ್ತಿದ್ದಾರೆ. ಇದನ್ನು ಕಂಡ ಮತದಾರರು ಭಾವನಾತ್ಮಕವಾಗಿ ಸ್ಪಂದನೆ ನೀಡುತ್ತಿದ್ದಾರೆ. ಪ್ರತಿ ಬಹಿರಂಗ ಸಮಾವೇಶದಲ್ಲಿ ಹಾಗೂ ಮನೆ ಮನೆ ಪ್ರಚಾರದಲ್ಲಿ ಪದ್ಮಾವತಿ ಅವರು ಪತಿಯ ಪರ ಮತಯಾಚನೆ ವೇಳೆ ಕಣ್ಣೀರಿಟ್ಟು ಸೆರಗೊಡ್ಡಿ ಮತಯಾಚನೆ ಮಾಡುವ ಶೈಲಿಗೆ ಮತದಾರರು ಒಮ್ಮೆಯಾದರೂ ಅವಕಾಶ ನೀಡುವ ಮನಸ್ಸು ಮಾಡುತ್ತಿದ್ದಾರೆ ಎಂಬಂತಹ ವಾತಾವರಣ ಕಂಡುಬರುತ್ತಿದೆ.
ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಮತದಾರರ ಬಳಿ ಸೆರಗೊಡ್ಡಿ ಮತಭಿಕ್ಷೆ ಬೇಡಿ ಯಶಸ್ವಿಯಾಗಿದ್ದ ಸುಮಲತಾ ಅವರ ಬ್ರಹ್ಮಾಸ್ತ್ರ ಬಳಕೆ ಮಾಡುತ್ತಿರುವ ಮುನೇಗೌಡ ಪತ್ನಿ ಅಸ್ತ್ರಕ್ಕೆ ಮತದಾರರು ಮನಸೋತು ಆಶೀರ್ವಾದ ಮಾಡುತ್ತಾರಾ ಎಂಬುಂದು ಮೇ 13ರ ಫಲಿತಾಂಶದಂದು ತಿಳಿಯಲಿದೆ.
ಜೆಡಿಎಸ್ ಜತೆ ನಿಲ್ಲಲಿದೆಯಾ ಒಕ್ಕಲಿಗ, ಮುಸ್ಲಿಂ ಸಮುದಾಯ?:ಒಕ್ಕಲಿಗ, ದಲಿತ ಸಮುದಾಯದ ಮತಗಳು ನಿರ್ಣಾಯಕವಾಗಿರುವ ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಈ ಬಾರಿ ಮುಸ್ಲಿಂ ಸಮುದಾಯದ ತೀರ್ಮಾನವೂ ಮುಖ್ಯವಾಗಿದೆ. ಒಕ್ಕಲಿಗ ಮತಗಳ ಮೇಲೆ ಕಣ್ಣಿಟ್ಟಿರುವ ಜೆಡಿಎಸ್ ಪ್ರತೀ ನಾಯಕರನ್ನು ಸೆಳೆಯುತ್ತಿದೆ. ಅಭ್ಯರ್ಥಿ ಬಿ.ಮುನೇಗೌಡ ಅವರೇ ಮನೆ ಮನೆ ತಲುಪಿ ಮೂರು ಬಾರಿ ಸೋತರೂ ನಿಮ್ಮ ಸೇವೆಯಲ್ಲಿದ್ದೇನೆ. ಒಮ್ಮೆಯಾದರೂ ನೀವು ಕೈಹಿಡಿಯಬೇಕೆಂದು ಮತಯಾಚನೆ ಮಾಡುತ್ತಿರುವುದು ಮತ್ತೊಂದು ಅನುಕಂಪದ ಅಲೆ ಸೃಷ್ಟಿಸಿದೆ. ಮುನೇಗೌಡರ ಮನವಿಗೆ ಸ್ಪಂದಿಸಿರುವ ನಾಯಕರು ಸಾಥ್ ನೀಡಿ, ಜಯಶೀಲರನ್ನಾಗಿಸುವ ಭರವಸೆ ನೀಡಿದ್ದಾರೆ. ಇತ್ತ ಮುಸ್ಲಿಂ ಸಮುದಾಯದ ಮತಬೇಟೆಗೆ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮೂಲಕ ಮತಯಾಚಿಸಿ ಒಗ್ಗೂಡಿಸಿರುವುದು ವಿಶೇಷ.
ಗ್ರಾಮಾಂತರದಲ್ಲಿ ದಳಪತಿಗಳದ್ದೇ ಮೇಲುಗೈ:ತಾಲೂಕಿನ ಪ್ರತಿ ಚುನಾವಣೆಯಲ್ಲಿ ಜೆಡಿಎಸ್ ಕೈ ಹಿಡಿಯುವ ಸಾಸಲು ಹೋಬಳಿ ಸೇರಿ ಗ್ರಾಮಾಂತರ ಭಾಗದಲ್ಲಿ ಈ ಬಾರಿ ಜೆಡಿಎಸ್‌ಗೆ ಉತ್ತಮವಾದ ಪೂರಕ ವಾತಾವರಣ ಸೃಷ್ಟಿಯಾಗಿದೆ. ಇದಕ್ಕೆ ನಾಮಪತ್ರ ಸಲ್ಲಿಕೆ ವೇಳೆ ಸೇರಿದ ಜನಸ್ತೋಮವೇ ಸಾಕ್ಷಿ ಎಂದು ಜೆಡಿಎಸ್ ಮುಖಂಡರು ಹೇಳಿದ್ದಾರೆ.
ದಯವಿಟ್ಟು ನನ್ನ ಮನೆ ದೇವರನ್ನು ಉಳಿಸಿಕೊಡ್ರಪ್ಪ, ನನ್ನ ಗಂಡನಿಗೆ ಒಮ್ಮೆ ಅವಕಾಶ ಮಾಡಿಕೊಡ್ರಪ್ಪ, ನಿಮ್ಮ ಮನೆ ಮಗಳಾಗಿ ಕೇಳುತ್ತಿದ್ದೇನೆ. ಮೂರು ಬಾರಿ ಸೋತಿದ್ರು ನಿಮ್ಮ ಸೇವೆ ಮಾಡುತ್ತಿದ್ದೇವೆ. ನೀರು ಕೊಟ್ಟಿರುವ ಮುನೇಗೌಡರಿಗೆ ಒಮ್ಮೆ ಮತಭಿಕ್ಷೆ ನೀಡಿ ಜೀವ ಕಾಪಾಡ್ರಪ್ಪ, ಏನಾದರೂ ಮಾಡಿ ಎಂಎಲ್ಎ ಮಾಡ್ರಪ್ಪ, ನಿಮ್ಮೆಲ್ಲರಿಗೂ ಸೆರಗೊಡ್ಡಿ ಮತಭಿಕ್ಷೆ ಕೇಳುತ್ತಿದ್ದೇನೆ. ಕೊನೇ ಬಾರಿಯಾದರೂ ನಮ್ಮ ಜೀವ ಉಳಿಸ್ರಪ್ಪ, ನಮ್ಗೆ ಯಾವ ಆಸ್ತಿನೂ ಬೇಡ. ನಿಮ್ಮ ಸೇವೆಯೇ ನಮ್ಮ ಗುರಿ.
ಪದ್ಮಾವತಿ ಬಿ.ಮುನೇಗೌಡ
ವಿಧಾನಸಭೆ ಚುನಾವಣೆಯಲ್ಲಿ ಸತತವಾಗಿ ಸೋತರೂ ಕ್ಷೇತ್ರದ ಜನರ ಹೃದಯದಲ್ಲಿ ನಾನಿದ್ದೇನೆ. ನಿರಂತರವಾಗಿ ಅವರ ಸಂಪರ್ಕದಲ್ಲಿದ್ದೇನೆ. ಹೀಗಾಗಿ ಪಕ್ಷ ನನಗೆ ಮತ್ತೆ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಮತಯಾಚಿಸುವ ವೇಳೆ ಸಹಜವಾಗಿ ಹೃದಯ ತುಂಬಿ ಕಣ್ಣೀರು ಬರುತ್ತದೆ. ಆದರೆ, ವಿರೋಧಿಗಳು ಇದನ್ನು ಟೀಕಿಸುತ್ತಿರುವುದು ಖಂಡನೀಯ. ಇದಕ್ಕೆ ಮತದಾರರೇ ಉತ್ತರ ನೀಡಲಿದ್ದಾರೆ.
ಬಿ.ಮುನೇಗೌಡ, ಜೆಡಿಎಸ್ ಅಭ್ಯರ್ಥಿ