ಚಿಕ್ಕಬಳ್ಳಾಪುರ: ಒಬ್ಬರ ಪ್ರಾಣ ಸಂಕಟದಲ್ಲಿರುವಾಗ ಯಾರೇ ಆಗಲಿ ಚೆಲ್ಲಾಟ ಆಡಬಾರದು ಎಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ರಾಜಕೀಯ ಗೊಂದಲ ಮೂಡಿಸಲು ಪ್ರಾಣ ಸಂಕಟದ ವಿಚಾರದಲ್ಲಿ ಮನಸ್ಸಿಗೆ ಬಂದಂತೆ ಹೇಳಿಕೆ ಕೊಡುವುದು ಸರಿಯಲ್ಲ. ಆತ್ಮಹತ್ಯೆ ಯತ್ನಕ್ಕೆ ನಿಖರವಾದ ಕಾರಣ ಹೇಳಲು ಸಂತೋಷ್ ಮೊದಲು ಚೇತರಿಸಿಕೊಳ್ಳಬೇಕು. ಡಿ.ಕೆ.ಶಿವಕುಮಾರ್ ಬಳಿ ಯಾವುದೇ ಸಿಡಿ ಇದ್ದರೆ ತನಿಖಾ ತಂಡಕ್ಕೆ ಕೊಡಲಿ, ಅದು ಬಿಟ್ಟು ದಾರಿತಪ್ಪಿಸುವ ಕೆಲಸ ಮಾಡಬಾರದು ಎಂದು ನಗರದಲ್ಲಿ ಭಾನುವಾರ ಕಿಡಿಕಾರಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಸರ್ವಜ್ಞರು, ರಾಜಕೀಯ ನಿಪುಣರು. ಅವರು ನನ್ನನ್ನು ಅಪ್ರಬುದ್ಧ ಎಂದಿರುವುದಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ, ಈ ವಿಷಯದಲ್ಲಿ ಅವರ ಬಗ್ಗೆಯೂ ಮಾತನಾಡುವುದಕ್ಕೆ ಹೋಗುವುದಿಲ್ಲ ಎಂದರು.
ಹೊಸ ನಿಗಮ ಅಭಿವೃದ್ಧಿಗೆ ಸಹಕಾರಿ: ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ಸಮುದಾಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೊಸ ನಿಗಮ, ಪ್ರಾಧಿಕಾರ ರಚಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಅನುದಾನ ಮೀಸಲಿಟ್ಟು ಅಭಿವೃದ್ಧಿಪಡಿಸಲು ಸಹಕಾರಿಯಾಗುತ್ತದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೊಸ ನಿಗಮ ರಚನೆ ವಿಚಾರದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಇದರಲ್ಲಿ ತಪ್ಪು ಹುಡುಕುವುದು ಬೇಡ ಎಂದು ಕಟೀಲ್ ಸಮಜಾಯಿಷಿ ನೀಡಿದರು.
ಸಚಿವ ಸಂಪುಟ ಮರುರಚನೆ ಸಿಎಂ ವಿವೇಚನೆಗೆ ಬಿಟ್ಟ ವಿಚಾರ. ಪಕ್ಷದ ಕೆಲ ಶಾಸಕರು ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಒಂದೆಡೆ ಸೇರಿ ಚರ್ಚಿಸಿದ್ದಾರೆ. ಇದು ಭಿನ್ನಮತ ಸಭೆಯಲ್ಲ. ಇದಕ್ಕೆ ಬಿಜೆಪಿಯಲ್ಲಿ ಅವಕಾಶ ನೀಡುವುದಿಲ್ಲ. ಅಭಿಪ್ರಾಯಗಳನ್ನು ಮುಖ್ಯಮಂತ್ರಿ ಬಳಿ ಇಲ್ಲವೇ ಪಕ್ಷದ ವೇದಿಕೆಯಲ್ಲಿ ಹೇಳಬಹುದಷ್ಟೇ. ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ