ಜಿಲ್ಲೆ

ಒಬಿಸಿ ಮೀಸಲು ಸೌಲಭ್ಯಕ್ಕೆ ಆಗ್ರಹ

ಚಿತ್ರದುರ್ಗ: ಕೇಂದ್ರ ಸರ್ಕಾರ ಕುಂಚಿಟಿಗ ಸಮುದಾಯಕ್ಕೆ ತ್ವರಿತವಾಗಿ ಒಬಿಸಿ ಮೀಸಲಾತಿ ಘೋಷಿಸಬೇಕು ಎಂದು ಹಿರಿಯೂರು ತಾಲೂಕಿನ ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಹಿರಿಯೂರಿನಿಂದ ಪಾದಯಾತ್ರೆ ಮೂಲಕ ಚಿತ್ರದುರ್ಗ ಪ್ರವೇಶಿಸಿದ ನೂರಾರು ಪ್ರತಿಭಟನಾಕಾರರು, ಒನಕೆ ಓಬವ್ವ ವೃತ್ತದಲ್ಲಿ ಸಂಜೆ 6ರ ವರೆಗೂ ಧರಣಿ ನಡೆಸಿ, ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ರವಾನಿಸಿದರು.

ರಾಜ್ಯದಲ್ಲಿ 26 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಕುಂಚಿಟಿಗರು 26 ವರ್ಷದಿಂದ ಹೋರಾಟ ನಡೆಸಿದ್ದರ ಫಲವಾಗಿ ರಾಜ್ಯ ಸಚಿವ ಸಂಪುಟದಲ್ಲಿ ಮಂಡಿಸಿ, ಅನುಮೋದನೆ ನೀಡಲಾಗಿದೆ. ಕೇಂದ್ರ ಸರ್ಕಾರ 2024ರ ಲೋಕಸಭಾ ಚುನಾವಣೆಯೊಳಗೆ ಒಬಿಸಿ ಮೀಸಲು ಪಟ್ಟಿಯಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಎಚ್.ರಂಗನಾಥ, ಪದಾಧಿಕಾರಿಗಳಾದ ಎಂ.ಗಿರಿಸ್ವಾಮಿ, ಜೋಗೇಶ್, ಡಿ.ಚಂದ್ರಗಿರಿ, ಮಂಜುನಾಥ್, ವಿ.ಕುಬೇರಪ್ಪ, ಡಿ.ಹನುಮಂತರಾಯ ಇತರರಿದ್ದರು.