ಚಿತ್ರದುರ್ಗ:ನಗರಸಭೆ ರಸ್ತೆ,ಚರಂಡಿ ಹಾಗೂ ಖಾಲಿ ಜಾಗಗಳನ್ನು ಒತ್ತುವರಿ ಮಾಡಿಕೊಂಡು ಶೆಡ್,ಕಟ್ಟಡ,ಕಾಂಪೌಂಡ್,ತೊಟ್ಟಿ ಇತ್ಯಾದಿ ನಿರ್ಮಾಣ ಅಪರಾಧವಾಗಿದೆ ಎಂದು ಪೌರಾಯುಕ್ತೆ ಎಂ.ರೇಣುಕಾ ನಾಗರಿಕರನ್ನು ಎಚ್ಚರಿಸಿದ್ದಾರೆ. ನಗರಸಭೆಗೆ ಸೇರಿದ ಆಸ್ತಿಯನ್ನು ಅತಿಕ್ರಮಿಸಿ ಕಟ್ಟಡ ನಿರ್ಮಿಸಿದರೆ ತೆರವುಗೊಳಿಸಲಾಗುವುದು. ನಗರದ ಕೆಎಚ್‌ಬಿ ಕಾಲನಿ ಹಾಗೂ ಬಿಎಲ್ ಗೌಡ ಲೇಔಟ್‌ನಲ್ಲಿ ನಗರಸಭೆ ಜಾಗದಲ್ಲಿ ನಿರ್ಮಿಸಿದ್ದ ಅನಧಿಕೃತ ಕಟ್ಟಡಗಳನ್ನು ಬುಧವಾರ ತೆರವುಗೊಳಿಸಲಾಗಿದೆ. ನಗರಸಭೆ ಜಾಗ,ರಸ್ತೆ, ಚರಂಡಿ,ಉದ್ಯಾನಗಳು ಸಾರ್ವಜನಿಕರ ಅನೂಕೂಲಕ್ಕಾಗಿದ್ದು,ಇವುಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ನಗರಸಭೆಯಿಂದ ಕಟ್ಟಡ ನಕ್ಷೆ ಅನುಮೋದನೆ ಪಡೆಯದೆ ಅನಧಿಕೃತವಾಗಿ ಕಟ್ಟಡ ನಿರ್ಮಿಸಿದರೆ ಕಾಯ್ದೆ ಅನುಸಾರ ದಂಡ ವಿಧಿಸಿ, ಕ್ರಮ ಜರುಗಿಸಲಾಗು ವುದೆಂದು ಅವರು ತಿಳಿಸಿದ್ದಾರೆ.