ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಡಿ.ಮಹೇಶ್
ಚಿಕ್ಕಮಗಳೂರು: ವ್ಯಕ್ತಿಯೊಬ್ಬರು ಒತ್ತುವರಿ ಮಾಡಿರುವ ನೈಸರ್ಗಿಕವಾದ ಹಳ್ಳದ ಜಾಗವನ್ನು ತೆರವುಗೊಳಿಸುವಂತೆ ಹೈಕೋರ್ಟ್ ಆದೇಶವಿದ್ದರೂ ಕಡೂರು ತಹಸೀಲ್ದಾರರು ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ ಜೂನ್ ೯ರಿಂದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಡಿ.ಮಹೇಶ್ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಡೂರು ತಾಲೂಕು ಬಾಣೂರು ಗ್ರಾಮದ ಸರ್ವೆ ನಂ.೧೩೫/೭ ರಲ್ಲಿ ಶಿವಪುರ ಗ್ರಾಮದ ಎಸ್.ಬಸವರಾಜಪ್ಪ ಎಂಬುವವರು ಪ್ರಕೃತಿದತ್ತವಾದ ಸುಮಾರು ೧೭ ಅಡಿ ಅಗಲದ ಹಳ್ಳವನ್ನು ಮುಚ್ಚಿದ್ದಾರೆ. ಇದರ ಪರಿಣಾಮ ಬಡ ರೈತನಾದ ಬಾಣೂರಿನ ಬಿ.ಎಸ್.ಸೋಮಶೇಖರಪ್ಪ ಮತ್ತು ಇತರ ರೈತರ ಜಮೀನುಗಳ ಮೇಲೆ ನೀರು ನುಗ್ಗುತ್ತಿದ್ದು ಫಲವತ್ತತೆಯನ್ನು ಕಳೆದುಕೊಳ್ಳುವ ಜೊತೆಗೆ ಉಳುಮೆ ಮಾಡಲು ತೊಂದರೆಯಾಗುತ್ತಿದೆ ಎಂದು ದೂರಿದರು.
ಎಸ್.ಬಸವರಾಜಪ್ಪ ಅವರು ಹಳ್ಳವನ್ನು ಮುಚ್ಚಿ ಬೇಲಿ ಹಾಕಿಕೊಂಡಿದ್ದಾರೆ. ಈ ಬಗ್ಗೆ ಕಡೂರು ತಹಸೀಲ್ದಾರರಿಗೆ ದೂರು ನೀಡಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಬಿ.ಎಸ್. ಸೋಮಶೇಖರಪ್ಪ ಅವರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು.
ನ್ಯಾಯಾಲಯವು ಕಳೆದ ಜನವರಿ ೨೨ ರಂದೇ ಆದೇಶ ನೀಡಿ ಒತ್ತುವರಿ ತೆರವುಗೊಳಿಸಿ ಮುಂದೆಂದು ಒತ್ತುವರಿ ಮಾಡದಂತೆ ಮುಚ್ಚಳಿಕೆ ಪತ್ರವನ್ನು ಬರೆಸಿಕೊಳ್ಳಬೇಕೆಂದು ಆದೇಶಿಸಿ, ಆದೇಶ ತಲುಪಿದ ೬ ವಾರಗಳೊಳಗೆ ಒತ್ತುವರಿಯನ್ನು ತೆರವುಗೊಳಿಸಬೇಕೆಂದು ಕಡೂರು ತಹಸೀಲ್ದಾರ್‌ರವರನ್ನು ಜವಾಬ್ದಾರರನ್ನಾಗಿ ಮಾಡಿ ಆದೇಶ ನೀಡಿದೆ ಎಂದರು.
ಆದರೆ ಕಡೂರು ತಹಸೀಲ್ದಾರರವರು ಇದೂವರೆಗೂ ನ್ಯಾಯಾಲಯದ ಆದೇಶವನ್ನು ಪಾಲಿಸದೆ ಆದೇಶವನ್ನು ಗೌರವಿಸದೆ ನ್ಯಾಯಾಲಯದ ನಿಗಧಿತ ಗಡುವಿನೊಳಗೆ ಒತ್ತುವರಿದಾರರಿಂದ ಒತ್ತುವರಿಯನ್ನು ತೆರವುಗೊಳಿಸದೆ ಕರ್ತವ್ಯಲೋಪ ಎಸಗಿದ್ದಾರೆ ಎಂದು ದೂರಿದರು.
ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶ ಜಾರಿ ಮಾಡಿ, ಒತ್ತುವರಿ ತೆರವುಗೊಳಿಸಲು ಒಂದು ವಾರ ಗಡುವು ನೀಡುತ್ತೇವೆ. ಸೂಕ್ತ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಜೂನ್ ೯ ರಿಂದ ಕಡೂರು ತಹಸೀಲ್ದಾರ್ ಕಚೇರಿ ಎದುರು ಅನಿರ್ಧಿಷ್ಠಾವಧಿ ಪ್ರತಿಭಟನೆ ಆರಂಭಿಸುತ್ತೇವೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಪ್ರಮುಖರಾದ ಕೆ.ಕೆ.ಕೃಷ್ಣೇಗೌಡ, ಲೋಕೇಶ್, ಶಂಕರ್, ನಿಂಗೇಗೌಡ, ಆನಂದ್, ಹರಿಣಾಕ್ಷಿ, ಸೋಮಶೇಖರ್ ಇದ್ದರು.