ಬಾಳೆಹೊನ್ನೂರು: ಖಾಂಡ್ಯ ಹೋಬಳಿ ಪರದೇಶಪ್ಪನಮಠ ಪ್ರದೇಶದಲ್ಲಿ ಭದ್ರಾ ವನ್ಯಜೀವಿ ವಿಭಾಗದ ಹುಲಿ ಯೋಜನೆ ವ್ಯಾಪ್ತಿಗೆ ಒಳಪಟ್ಟ ಹಿಡುವಳಿ ಜಾಗವನ್ನು ಅರಣ್ಯ ಇಲಾಖೆ ಏಕಾಏಕಿ ತೆರವುಗೊಳಿಸಿದೆ ಎಂದು ಆರೋಪಿಸಿ ಗ್ರಾಮಸ್ಥರು ವಿವಿಧ ಸಂಘಟನೆಗಳ ಸಹಯೋಗದಲ್ಲಿ ಶುಕ್ರವಾರ ಕಡವಂತಿ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.</p><p>ಒಂದೇ ಸಮನೆ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದ ಗ್ರಾಮಸ್ಥರು, ಅರಣ್ಯ ಇಲಾಖೆ ಸಿಬ್ಬಂದಿ ಕತ್ತರಿಸಿದ ಫಸಲುಕಟ್ಟಿದ್ದ ಕಾಫಿ ಗಿಡಗಳನ್ನು ಗ್ರಾಮ ಪಂಚಾಯಿತಿ ಎದುರು ಇಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಖಾಂಡ್ಯ ಹಿತರಕ್ಷಣಾ ಸಮಿತಿಯ ಚಂದ್ರಶೇಖರ್ ರೈ ಮಾತನಾಡಿ, ಅರಣ್ಯ ಇಲಾಖೆ ಸಿಬ್ಬಂದಿ ಬ್ರಿಟಿಷ್ ಧೋರಣೆ ತೋರುತ್ತಿದ್ದಾರೆ. ನಿರ್ದಿಷ್ಟ ಆದೇಶ ಇಲ್ಲದೆ ಕಾಫಿ ಗಿಡಗಳನ್ನು ಕಡಿದಿದ್ದಾರೆ. ಒತ್ತುವರಿ ತೆರವುಗೊಳಿಸುವುದಾದಲ್ಲಿ ಅಲ್ಲಿನ ನಿವಾಸಿಗಳಿಗೆ ಕಾನೂನುಬದ್ಧವಾಗಿ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದರು.
ಎಂ.ಜೆ.ಚಂದ್ರಶೇಖರ್ ಮಾತನಾಡಿ, ಅಧಿಕಾರಿಗಳು ಬಡವರ ಜೀವನದ ಜತೆ ಚೆಲ್ಲಾಟ ಆಡುತ್ತಿದ್ದಾರೆ. ನೂರಾರು ವರ್ಷದ ಇತಿಹಾಸ ಇರುವ ಪರದೇಶಪ್ಪನಮಠದಿಂದ ನಮ್ಮನ್ನು ತೆರವುಗೊಳಿಸಲು ಸರ್ಕಾರ ಮುಂದಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಇದೇ ಧೋರಣೆ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಈ ಭಾಗದಲ್ಲೂ ನಕ್ಸಲ್ ಚಟುವಟಿಕೆ ಕಾಣಿಸಿಕೊಂಡರೆ ಆಶ್ಚರ್ಯವಿಲ್ಲ ಎಂದು ಎಚ್ಚರಿಸಿದರು. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿ ಬಂದು ಸಮಸ್ಯೆ ಆಲಿಸುವಂತೆ ಪ್ರತಿಭಟನಾನಿರತರು ಪಟ್ಟುಹಿಡಿದರು. ಆದರೆ ಯಾರೂ ಸ್ಥಳಕ್ಕೆ ಬಾರದ್ದರಿಂದ ಮತ್ತಷ್ಟು ಆಕ್ರೋಶಗೊಂಡು ಬಾಳೆಹೊನ್ನೂರು-ಚಿಕ್ಕಮಗಳೂರು ಮುಖ್ಯರಸ್ತೆ ಕಡಬಗೆರೆಯಲ್ಲಿ ಸಂಚಾರ ತಡೆದರು. ಇದರಿಂದಾಗಿ ಅರ್ಧಗಂಟೆ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಪ್ರತಿಭಟನಾನಿರತರ ಸಮಸ್ಯೆ ಆಲಿಸಿದರು. ದೂರವಾಣಿ ಮೂಲಕ ಚಿಕ್ಕಮಗಳೂರಿನ ಡಿಎಫ್ ಅವರನ್ನು ಸಂರ್ಪಸಿ ತೆರವು ಕಾರ್ಯಾಚರಣೆ ತಕ್ಷಣ ಸ್ಥಗಿತಗೊಳಿಸಬೇಕು. ಆ.15ರ ನಂತರ ಜಿಲ್ಲಾಧಿಕಾರಿ, ಡಿಎಫ್ಒ ಪರದೇಶಪ್ಪನಮಠದ ನಿವಾಸಿಗಳೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಬೇಕು ಎಂದು ತಿಳಿಸಿದರು.