ಕೊಲ್ಹಾರ: ಕೊಲ್ಹಾರ ಪುನರ್ವಸತಿ ಕೇಂದ್ರದಲ್ಲಿ ಮೂಲ ನೀಲಿನಕ್ಷೆಯ ಪ್ರಕಾರ ಸಂತ್ರಸ್ತರಿಗೆ ನಿವೇಶನಗಳ ಹಂಚಿಕೆ ಮಾಡಿ ಅಭಿವೃದ್ಧಿಗಾಗಿ ಬಿಟ್ಟಿರುವ ಸರ್ಕಾರದ ಜಮೀನು ಪುನರ್ವಸತಿ ಇಲಾಖೆಯಿಂದ ಪಟ್ಟಣ ಪಂಚಾಯಿತಿಗೆ ಬಿಟ್ಟುಕೊಡಲು ಮುಂದಾಗಬೇಕು ಎಂದು ಜವಳಿ ಸಕ್ಕರೆ ಖಾತೆ ಹಾಗೂ ಎಪಿಎಂಸಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದ ಪುನರ್ವಸತಿ ಕೇಂದ್ರದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪ್ರಗತಿ ಪರಿಶೀಲನೆ, ಸಮಸ್ಯೆಗಳ ಕುರಿತು ಚರ್ಚೆ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಮತ್ತು ಪುನರ್ನಿರ್ಮಾಣ ಅಧಿಕಾರಿಗಳಿಗಾಗಿ ಸ್ಥಳೀಯ ಪ್ರವಾಸಿಮಂದಿರದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಸಾರ್ವಜನಿಕರು ಯಾರಾದರೂ ಒತ್ತುವರಿ ಮಾಡಿಕೊಂಡಿದ್ದರೆ, ಅನಧಿಕೃತ ನಿವೇಶನಗಳ ಹಂಚಿಕೆ ಮಾಡಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕು. ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿದ್ದರೆ ತೆರವುಗೊಳಿಸಲು ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಸಾರ್ವಜನಿಕ ಉಪಯೋಗಕ್ಕೆ ಬಿಟ್ಟ ಹಾಗೂ ಇನ್ನುಳಿದ ಸರ್ಕಾರಿ ಜಮೀನನ್ನು ಸರ್ವೇ ಮಾಡಿದ ವರದಿ ಈಗಾಗಲೇ ತಮ್ಮ ಬಳಿಯಿದ್ದರೆ ಸರ್ಕಾರಿ ಜಮೀನಿನಲ್ಲಿ ಸರ್ಕಾರಿ ಕಚೇರಿಗಳನ್ನು ನಿರ್ಮಾಣ ಮಾಡಲು ಜಾಗದ ಅವಶ್ಯಕತೆಯಿದೆ. ತ್ವರಿತಗತಿಯಲ್ಲಿ ಜಮೀನಿನ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ಮಾಡಬೇಕು. ಕೊಲ್ಹಾರ ಪುನರ್ವಸತಿ ಕೇಂದ್ರದಲ್ಲಿ ನಕಲಿ ಹಕ್ಕುಪತ್ರಗಳ ಮೂಲಕ ನಿವೇಶನಗಳ ಹಂಚಿಕೆ ಮಾಡಿರುವುದನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕು. ಅದಕ್ಕೆ ಸಹಕಾರ ನೀಡಿದ ಸಂಬಂಧಪಟ್ಟವರ ವಿರುದ್ಧ ಅಧಿಕಾರಿಗಳು ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದರು.
ಕೊಲ್ಹಾರ ಪುನರ್ವಸತಿ ಕೇಂದ್ರದಲ್ಲಿ ಸಂತ್ರಸ್ತರು ನಾಲ್ಕು ಗುಂಟೆ ನಿವೇಶನ ಮಂಜೂರು ಮಾಡಿಸಿಕೊಂಡು ಹೆಚ್ಚುವರಿಯಾಗಿ ನಿವೇಶನಗಳು ಹಾಗೂ ಜಮೀನುಗಳನ್ನು ಬಳಕೆ ಮಾಡುತ್ತಿದ್ದಾರೆ ಎಂಬುದನ್ನು ತಿಳಿದ ಸಚಿವರು ಸ್ಥಳದಲ್ಲಿಯೇ ಪುನರ್ವಸತಿ ಅಧಿಕಾರಿ ಬಿರಾದಾರ ಅವರನ್ನು ತರಾಟೆಗೆ ತೆಗೆದುಕೊಂಡು ನೋಟಿಸ್ ಕೊಡಲು ಮೇಲಧಿಕಾರಿಗಳಿಗೆ ಸೂಚಿಸಿದರು. ಅತಿಕ್ರಮಣ ಮಾಡಿದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅಧಿಕಾರಿಗಳು ತೆರವು ಮಾಡಲು ಮುಂದಾಗಬೇಕು ಎಂದರು.
ಪ್ರವಾಸಿಮಂದಿರದಲ್ಲಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳಿಂದ ಬಂದ ಹಲವಾರು ಸಮಸ್ಯೆಗಳ ಕುರಿತು ಪರಿಶೀಲಿಸಿ ಸ್ಥಳದಲ್ಲಿಯೇ ಕೆಲವು ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ವಿಶೇಷ ಜಿಲ್ಲಾಧಿಕಾರಿ ಸೋಮನಿಂಗ ಗೆಣ್ಣೂರ, ಅಧಿಕಾರಿಗಳಾದ ರಮೇಶ ಕಳಸದ, ಸಾಜಿದ ಮುಲ್ಲಾ, ಯುಕೆಪಿ ವಿವಿಧ ಇಲಾಖೆಯ ಅಧಿಕಾರಿಗಳಾದ ಹಣಮಂತಪ್ಪ ದಾಸರ, ವೀರೇಶ ಬಿರಾದಾರ, ಜಿ.ಬಿ. ನಾಗಠಾಣ, ಪಪಂ ಮುಖ್ಯಾಧಿಕಾರಿ ವೀರೇಶ ಹಟ್ಟಿ ಹಾಗೂ ಇತರ ಇಲಾಖೆಯ ಅಧಿಕಾರಿಗಳು ಇದ್ದರು.