ರಾಣೆಬೆನ್ನೂರ: ರೈತ ಸಂಘಟನೆಗಳಿಂದ ಕರೆ ನೀಡಲಾಗಿದ್ದ ಬಂದ್ಗೆ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆಳಗ್ಗೆಯಿಂದ ಬಸ್, ಆಟೋ ಎಂದಿನಂತೆ ಓಡಾಡುತ್ತಿದ್ದವು. ಹೋಟೆಲ್, ಅಂಗಡಿ ಮುಂಗಟ್ಟುಗಳು ತೆರೆದುಕೊಂಡಿದ್ದವು.
ರೈತ ಸಂಘದ ಕಾರ್ಯಕರ್ತರು ಪ್ರತಿಭಟನಾ ರ‍್ಯಾಲಿ ನಡೆಸುತ್ತಿದ್ದ ಸಮಯದಲ್ಲಿ ಒತ್ತಾಯಪೂರ್ವಕವಾಗಿ ಪಿ.ಬಿ. ರಸ್ತೆಯ ಅಂಗಡಿಗಳನ್ನು ಬಂದ್ ಮಾಡಿಸಲು ಮುಂದಾದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕೆಲ ಅಂಗಡಿಕಾರರು, ‘ಕರೊನಾ ಸಲುವಾಗಿ ಮೊದಲೇ ವ್ಯಾಪಾರವಿಲ್ಲದೇ ಕುಳಿತಿದ್ದೇವೆ. ಬೇಕಾದರೆ ನಾವು ಸ್ವಯಂ ಪ್ರೇರಣೆಯಿಂದ ಬಂದ್ ಮಾಡುತ್ತೇವೆ. ನೀವು ಒತ್ತಾಯ ಮಾಡಲು ಬರಬೇಡಿ’ ದಬಾಯಿಸಿದರು. ಹೀಗಾಗಿ ಕೆಲಕಾಲ ರೈತ ಕಾರ್ಯಕರ್ತರು ಹಾಗೂ ವ್ಯಾಪಾರಸ್ಥರ ನಡುವೆ ವಾಗ್ವಾದ ನಡೆಯಿತು. ಸ್ಥಳಕ್ಕೆ ಬಂದ ಪೊಲೀಸರು ವಾತಾವರಣ ತಿಳಿಗೊಳಿಸಿದರು.
ನಗರದ ಕೆಇಬಿ ಗಣೇಶ ದೇವಸ್ಥಾನದಿಂದ ಮೆರವಣಿಗೆ ಆರಂಭಿಸಿದ ರೈತರು ಪಿ.ಬಿ. ರಸ್ತೆ ಮೂಲಕ ಬಸ್ ನಿಲ್ದಾಣ ವೃತ್ತ, ಕೋರ್ಟ್ ವೃತ್ತ, ಪೋಸ್ಟ್ ವೃತ್ತದ ಮೂಲಕ ಪ್ರಮುಖ ಬೀದಿಗಳಲ್ಲಿ ರ‍್ಯಾಲಿ ನಡೆಸಿದರು. ತಹಸೀಲ್ದಾರ್ ಬಸನಗೌಡ ಕೋಟೂರು ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಹನುಮಂತಪ್ಪ ಕಬ್ಬಾರ, ಚಂದ್ರಣ್ಣ ಬೇಡರ, ಪುಟ್ಟಪ್ಪ ಮರಿಯಮ್ಮನವರ, ಶಂಕ್ರಣ್ಣ ಮೆಣಸಿನಹಾಳ, ರವೀಂದ್ರಗೌಡ ಪಾಟೀಲ, ಎಸ್.ಡಿ. ಹಿರೇಮಠ, ಸುರೇಶಪ್ಪ ಗರಡಿಮನಿ, ದಿಳ್ಳೆಪ್ಪ ಸತ್ಯಪ್ಪನವರ, ಕರವೇ, ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.