ಜಿಲ್ಲೆ

ಒತ್ತಡದಲ್ಲಿ ಮಾನವೀಯ ಸಂಬಂಧಗಳು ದೂರ

ಕೂಡ್ಲಿಗಿ: ಮಂಗಳ ಗ್ರಹಕ್ಕೆ ಹೋಗುವವರೆಗೆ ತಾಂತ್ರಿಕವಾಗಿ ಮುಂದುವರಿದಿದ್ದರೂ ಅಂಗಳದಲ್ಲಿರುವವರನ್ನು ಮರೆತಿದ್ದೇವೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಚಂದ್ರಕಲಾ ಅಕ್ಕ ಹೇಳಿದರು.

ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ನಿವೃತ್ತ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಮಿತಿಯಿಂದ ಆಯೋಜಿಸಿದ್ದ ಮಾಸಿಕ ಕವಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದರು. ಮನುಷ್ಯ ವಿಪರೀತ ಒತ್ತಡದಲ್ಲಿ ಮಾನವೀಯ ಸಂಬಂಧಗಳನ್ನು ತೊರೆಯುತ್ತಿದ್ದಾನೆ ಎಂದು ಕಳವಳ ವ್ಯಕ್ತಪಡಿಸಿದರು.

ಸ್ನೇಹ, ಪ್ರೀತಿ, ವಾತ್ಸಲ್ಯಗಳನ್ನು ಮರೆಯುತ್ತಿದ್ದೇವೆ. ಇದರಿಂದಾಗಿ ಮಾನವೀಯ ಸಂಬಂಧಗಳು ನಶಿಸಿ ಹೋಗುತ್ತೀವೆ. ಅಧುನಿಕತೆ ಭರಾಟೆಯಲ್ಲಿ ಬಿಡುವಿಲ್ಲದೆ, ಯಾರೊಂದಿಗೂ ಬೆರೆಯದೆ ಏಕಾಂತದಲ್ಲಿ ಇರುವ ಮೂಲಕ ವಿಷಮ ಸ್ಥಿತಿಯನ್ನು ಮನುಷ್ಯ ತಲುಪಿದ್ದಾನೆ. ಆದ್ದರಿಂದ ಸನಾತನ ಧರ್ಮದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ದೇಹಕ್ಕೆ ಮರಣ ಬಾಧಿಸಿದರೂ, ಆತ್ಮಕ್ಕೆ ಅಮರತ್ವ ಇದ್ದು, ಇದು ಜ್ಞಾನದಿಂದ ಲಭಿಸುತ್ತದೆ. ಇದನ್ನು ಎಲ್ಲರೂ ಪಡೆಯುವಂತಾಗಬೇಕು ಎಂದರು.

ನಿವೃತ್ತ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಪಾಲ್ತೂರ್ ಶಿವರಾಜ ಮಾತನಾಡಿ, ಪಿಂಚಣಿ ಹಣ ಕ್ರೋಢೀಕರಿಸುವ ಮೂಲಕ ತಿಂಗಳ ವಿಶೇಷ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ ಈ ಮೂಲಕ ತಾಲೂಕಿನ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಏರ್ಪಡಿಸಲಾಗುತ್ತಿದೆ. ಕವಿಗೋಷ್ಠಿಯಲ್ಲಿನ ಕವನಗಳನ್ನು ಪುಸ್ತಕವಾಗಿ ಪ್ರಕಟಿಸುವ ಬಗ್ಗೆ ಸಮಿತಿ ತೀರ್ಮಾನ ಕೈಗೊಳ್ಳಲಿದೆ ಎಂದರು.

ಜಿಲ್ಲಾ ಶರಣ ಸಾಹಿತ್ಯ ಪ್ರಧಾನ ಕಾರ್ಯದರ್ಶಿ ಎನ್.ಎಂ. ರವಿಕುಮಾರ, ಪತ್ರಕರ್ತ ಹುಡೇಂ ಕೃಷ್ಣಮೂರ್ತಿ, ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಹ ಸಂಚಾಲಕಿ ಶಶಿಕಲಾ ಅಕ್ಕ, ನಿವೃತ್ತ ಉಪನ್ಯಾಸಕ ಸುರೇಶ ಮುದ್ದೆಬಿಹಾಳ, ಸೇವಾನಾಯ್ಕ, ನಂದಿ ಬಸವರಾಜ, ಕೆಎಚ್‌ಎಂ ಮಲ್ಲಿಕಾರ್ಜುನಯ್ಯ, ಬಿ.ಗೌರಮ್ಮ, ಗಂಗಣ್ಣ, ಉಮಾ ಮಹೇಶ್ವರ, ಬಸವರಾಜಪ್ಪ, ವೀರಭದ್ರಪ್ಪ ಇದ್ದರು.