ಜಿಲ್ಲೆ

ಒತ್ತಡಕ್ಕೊಳಗಾಗದೆ ಸಮೀಕ್ಷೆ ಕಾರ್ಯ ನಡೆಸಿ

ಬೇಲೂರು: ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಕಾರ್ಯಕ್ಕಾಗಿ ಸರ್ಕಾರ ಹೆಚ್ಚುವರಿಯಾಗಿ ಇನ್ನೂ ಹತ್ತು ದಿನಗಳನ್ನು ವಿಸ್ತರಿಸಿರುವುದರಿಂದ ಯಾವುದೇ ಶಿಕ್ಷಕರು ಒತ್ತಡಕ್ಕೊಳಗಾಗದೆ ಹಾಗೂ ಅವಸರದಿಂದ ವಾಹನ ಓಡಿಸದೆ ಎಚ್ಚರದಿಂದ ಗಣತಿ ಕಾರ್ಯದಲ್ಲಿ ತೊಡಗುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಸ್.ಬಿ.ಪಾಲಾಕ್ಷ ತಿಳಿಸಿದ್ದಾರೆ.

ಸರ್ಕಾರ ನೇಮಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಕಾರ್ಯಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ಬೇಲೂರು ತಾಲೂಕಿನ ಹಲವಾರು ಶಿಕ್ಷಕರು ಮತ್ತು ಶಿಕ್ಷಕಿಯರು ವಿವಿಧ ರೀತಿಯಲ್ಲಿ ಗಾಯಗೊಂಡಿರುವುದು ವಿಷಾದನೀಯ.

ಈಗಾಗಲೇ ನಮ್ಮ ಬೇಲೂರು ತಾಲೂಕಿನಲ್ಲಿ ಜನ ಗಣತಿಗೆ ಹೋದ ಸಂದರ್ಭದಲ್ಲಿ ಶಿಕ್ಷಕಿ ಚಿಕ್ಕಮ್ಮ ಎಂಬುವವರು ನಾಯಿ ದಾಳಿಗೆ ಸಿಲುಕಿ ಗಾಯಗೊಂಡಿದ್ದಾರೆ. ಮತ್ತೋರ್ವ ಲತಾ ಎಂಬ ಶಿಕ್ಷಕಿ ಬಿದ್ದು ಕಾಲು ಮುರಿದುಕೊಂಡಿದ್ದರೆ, ಗೆಂಡೇಹಳ್ಳಿಯಲ್ಲಿ ಇನ್ನೊಬ್ಬ ಶಿಕ್ಷಕಿ ಲುಬ್ನಾ ಅವರು ನಾಯಿ ಬಂದಿದ್ದರಿಂದ ದ್ವಿಚಕ್ರ ವಾಹನದಿಂದ ಬಿದ್ದು ಕೈ ಮುರಿದುಕೊಂಡಿರುವ ಘಟನೆಗಳು ನಡೆದಿವೆ. ಬುಧವಾರ ಬೈಕಿನಲ್ಲಿ ಜನಗಣತಿಗೆ ಹೋಗುತ್ತಿದ್ದ ಶಿಕ್ಷಕ ಈರೇಗೌಡರಿಗೆ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದ್ದಿದ್ದು, ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಈ ಎಲ್ಲ ಘಟನೆಗಳೂ ನಮ್ಮ ಶಿಕ್ಷಕರು ಗಣತಿ ಕೆಲಸದ ಒತ್ತಡಕ್ಕೊಳಗಾಗಿರುವುದು ಎದ್ದು ಕಾಣುತ್ತಿದೆ. ಇಂತಹ ಎಲ್ಲ ಘಟನೆಗಳಿಂದಾಗಿ ಸರ್ಕಾರ ಗಣತಿಗಾಗಿ ಇನ್ನೂ 10 ದಿನಗಳನ್ನು ವಿಸ್ತರಿಸಿದ್ದು, ಗಣತಿಯಲ್ಲಿ ಭಾಗವಹಿಸಿರುವ ಶಿಕ್ಷಕರು ಒತ್ತಡಕ್ಕೆ ಒಳಗಾಗಿ ಹಾಗೂ ಅವಸರದಿಂದ ಗಣತಿ ಮಾಡಲು ವಾಹನ ಓಡಿಸಿಕೊಂಡು ಹೋಗದೆ, ನಿಧಾನವಾಗಿ, ಎಚ್ಚರಿಕೆಯಿಂದ ಗಣತಿಯಲ್ಲಿ ತೊಡಗಬೇಕು. ಅಲ್ಲದೆ ಹಾಸನ ಜಿಲ್ಲೆಯಲ್ಲಿ ಬೇಲೂರು ತಾಲೂಕು ಶೇಕಡವಾರು ಗಣತಿಯಲ್ಲಿ ಮುಂದಿದೆ. ಇದಕ್ಕೆ ತಾಲೂಕಿನ ಶಿಕ್ಷಕರ ಕ್ರಿಯಾಶೀಲ, ಸಕ್ರಿಯಾತ್ಮಕ, ಸ್ಫೂರ್ತಿದಾಯಕ ಕೆಲಸ ಕಾರಣವಾಗಿದೆ.

ಮುಂದಿನ ಗಣತಿ ಕಾರ್ಯ ಮಾಡುವಾಗ ಶಿಕ್ಷಕರು ಯಾವುದೇ ಭಯ, ಒತ್ತಡಕ್ಕೊಳಗಾಗದೆ ಗಣತಿ ಕಾರ್ಯದಲ್ಲಿ ತೊಡಗಬೇಕು. ಶಿಕ್ಷಕರ ಜತೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ತಮ್ಮ ನೋವು ನಲಿವುಗಳಿಗೆ ಸದಾ ನಿಮ್ಮ ಜತೆಯಲ್ಲಿರುತ್ತೇವೆ. ಅಲ್ಲದೆ ನಮ್ಮ ಸಂಘದ ಮನವಿ ಮತ್ತು ಶಿಕ್ಷಕರ ಸಮೀಕ್ಷೆಗೆ ಬದಲಿ ವ್ಯವಸ್ಥೆಗೆ ತಕ್ಷಣವೇ ಸ್ಪಂದಿಸಿದ ಜಿಲ್ಲಾಧಿಕಾರಿ ಲತಾಕುಮಾರಿ, ತಹಸೀಲ್ದಾರ್ ಶ್ರೀಧರ್ ಕಂಕನವಾಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಉದಯಕುಮಾರ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.