ಕಲಬುರಗಿ: ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಪೊಲೀಸರು ಸೇರಿ ಎಲ್ಲ ಸರ್ಕಾರಿ ನೌಕರರ ಮೇಲೆ ದೊಡ್ಡ ಒತ್ತಡ ಹೇರಲಾಗುತ್ತಿದೆ. ಪ್ರತಿ ತಿಂಗಳು ನೌಕರರಿಗೆ ಸಂಬಳ ನೀಡಲು ಆಗುತ್ತಿಲ್ಲ. ಆದರೆ ಕಾಂಗ್ರೆಸ್ ಜನಪ್ರತಿನಿಧಿಗಳು ಹಫ್ತಾ ವಸೂಲಿ ಒಂದನೇ ತಾರಿಕೀಗೆ ಬರಬೇಕು ಎಂದು ಒತ್ತಡ ಹೇರುತ್ತಿದ್ದಾರೆ. ರಾಜ್ಯ ಸರ್ಕಾರ ದಿವಾಳಿ ಆಗಿದ್ದರಿಂದ ಇಂತಹ ಸ್ಥಿತಿ ಸೃಷ್ಟಿ ಆಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ ಆರೋಪಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಪ್ರಿನ್ಸಿಪಲ್ ಸೆಕ್ರೆಟರಿಯಿಂದ ಪಿಡಿಒವರೆಗೆ ಹಫ್ತಾ ವಸೂಲಿ ಪದ್ಧತಿ ನಡೆದಿದೆ. ಹಫ್ತಾ ಹಣ ಹೊಂದಿಸಲು ಪೊಲೀಸರು ರಸ್ತೆಯಲ್ಲಿ ಹಣ ವಸೂಲಿಗೆ ನಿಲ್ಲುವಂತೆ ಆಗಿದ್ದು, ಜನರಿಗೆ ಕಿರಿ ಕಿರಿ ಆಗುತ್ತಿದೆ. ಲಂಚ ಕೊಡದೇ ಒಂದೇ ಒಂದು ಕೆಲಸ ಆಗುತ್ತಿಲ್ಲ. ಇಂತಹ ಒತ್ತಡ ತಡೆಯಲು ಆಗದೆ ಯಾದಗಿರಿಯ ಪಿಎಸ್‌ಐ ಪರಶುರಾಮ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದಕ್ಕೆ ಸರ್ಕಾರವೇ ನೇರ ಹೊಣೆ ಆಗಿದೆ. ಸಿಐಡಿಯಿಂದ ಈ ಸತ್ಯ ಹೊರಬರಲು ಸಾಧ್ಯವಿಲ್ಲ. ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಜನಪ್ರತಿನಿಧಿಗಳ ಒತ್ತಡದ ಬಗ್ಗೆ ಪರಶುರಾಮ ಅವರು ಪತ್ನಿಯೊಂದಿಗೆ ಎಲ್ಲವನ್ನು ಹೇಳಿಕೊಂಡಿದ್ದಾರೆ. ಒತ್ತಡ ಹೇರಿ ಜೀವ ಪಡೆಯುವ ಇದೊಂದು ಹೊಸ ಉದಾಹರಣೆ ಸೃಷ್ಟಿಯಾಗಿದೆ. ಈ ಸರ್ಕಾರ ಪರಶುರಾಮ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು. ಕುಟುಂಬದವರಿಗೆ ಸರ್ಕಾರಿ ನೌಕರಿ ನೀಡಬೇಕು.| ಪಿ.ರಾಜೀವ್ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ