ಜಿಲ್ಲೆ

ಒತ್ತಡ ಪ್ರಪಂಚಕ್ಕೆ ಯೋಗ ಮನೋನಿಗ್ರಹ ಮಾರ್ಗ

ಮೈಸೂರು: ಒತ್ತಡ ಪ್ರಪಂಚದಲ್ಲಿ ಯೋಗ ಅತ್ಯಂತ ಪೂರಕವಾದ ಮನೋನಿಗ್ರಹ ಮಾರ್ಗೋಪಾಯ ಎಂದು ನವದೆಹಲಿಯ ಮುರಾರ್ಜಿ ದೇಸಾಯಿ ಯೋಗ ಕೇಂದ್ರದ ನಿರ್ದೇಶಕ ಡಾ.ಈಶ್ವರ್ ವಿ.ಬಸವರಡ್ಡಿ ಅಭಿಪ್ರಾಯಪಟ್ಟರು.

ಜೆಎಸ್‌ಎಸ್ ಆಯುರ್ವೇದ ವೈದ್ಯಕೀಯ ಕಾಲೇಜು, ಜೆಎಸ್‌ಎಸ್ ವೈದ್ಯಕೀಯ ಕಾಲೇಜು, ಜೆಎಸ್‌ಎಸ್ ಫಿಸಿಯೋಥೆರಪಿ ಕಾಲೇಜು, ಜೆಎಸ್‌ಎಸ್ ವಾಕ್ ಮತ್ತು ಶ್ರವಣ ಸಂಸ್ಥೆ ಸಹಯೋಗದಲ್ಲಿ ಜೆಎಸ್‌ಎಸ್ ಆಸ್ಪತ್ರೆಯ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಉನ್ನತ-2023’ ನರರೋಗಗಳ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಭಾರತವು ವಿಶ್ವದ ಯೋಗ ಗುರು. ಮನುಷ್ಯನ ಸರ್ವಾಂಗೀಣ ಬೆಳವಣಿಗೆಗೆ ಯೋಗ ಪೂರಕವಾಗಿದೆ. ಜತೆಗೆ, ನರಮಂಡಲದ ಸಮಸ್ಯೆಗಳನ್ನು ತಡೆಗಟ್ಟಲು ಹಾಗೂ ಚಿಕಿತ್ಸಾ ಅವಧಿಯಲ್ಲಿ ಸಂಯೋಜಿತ ಚಿಕಿತ್ಸಾ ಪದ್ಧತಿಗಳಲ್ಲಿ ಯೋಗವನ್ನು ಕೇಂದ್ರೀಕರಿಸಿ ಮನೋಇಂದ್ರಿಯಗಳನ್ನು ಗಮನದಲ್ಲಿಟ್ಟುಕೊಂಡು ಚಿಕಿತ್ಸಿಸುವುದು ಪರಿಣಾಮಕಾರಿಯಾಗಿದೆ ಎಂದರು.

ಜಿ-20 ಶೃಂಗಸಭೆಯ ಧ್ಯೇಯ ವಾಕ್ಯವಾದ ‘ವಸುದೈವ ಕುಟುಂಬಕಂ’ ಎಂಬಂತೆ ಆಯುರ್ವೇದ, ಆಧುನಿಕ ವೈದ್ಯ ಪದ್ಧತಿ, ಪ್ರಕೃತಿ ಚಿಕಿತ್ಸೆ, ಯೋಗ, ಇತರ ವೈದ್ಯ ಪದ್ಧತಿಗಳಿಗೆ ಪೂರಕವಾದ ಸಂಯೋಜಿತ ಚಿಕಿತ್ಸೆಗಳು. ಇದು ಇಂದಿನ ಹೊಸ ರೋಗಗಳಿಗೆ ಪರಿಣಾಮಕಾರಿ ಚಿಕಿತ್ಸೆಯಾಗಬಲ್ಲವು. ಈ ನಿಟ್ಟಿನಲ್ಲಿ ಜೆಎಸ್‌ಎಸ್ ವೈದ್ಯಕೀಯ ಶಿಕ್ಷಣ ಸಂಸ್ಥೆ ಮಾಡುತ್ತಿರುವ ಸಂಶೋಧನಾತ್ಮಕ ಸಂಯೋಜಿತ ಚಿಕಿತ್ಸೆಗಳು ಮನುಕುಲಕ್ಕೆ ಆಶಾಕಿರಣವಾಗಿದೆ ಎಂದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಸಂಯೋಜಿತ ವೈದ್ಯ ಪದ್ಧತಿಗಳ ಪ್ರಸ್ತುತತೆ ಹಾಗೂ ಸಂಶೋಧನೆ ಕುರಿತು ಮಾತನಾಡಿದರು.

ಜೆಎಸ್‌ಎಸ್ ಮಹಾವಿದ್ಯಾಪೀಠದ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್.ಮಹೇಶ್ ಮಾತನಾಡಿ, ಇಂಟಿಗ್ರೇಟೆಡ್ ವೈದ್ಯ ಪದ್ಧತಿಯ ಸಂಶೋಧನೆ ಇಂದಿನ ಆರೋಗ್ಯ ವ್ಯವಸ್ಥೆಗೆ ಪೂರಕವಾಗಬಲ್ಲದು ಎಂದರು.

ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜಿ.ಬೆಟಸೂರಮಠ ಮಾತನಾಡಿ, ಸಮಾಜದ ಆರೋಗ್ಯಕ್ಕೆ ಎಲ್ಲ ವೈದ್ಯ ಪದ್ಧತಿಗಳು ಪರಸ್ಪರ ಪೂರಕವಾಗುವ ಮೂಲಕ ಮನುಕುಲದ ಆರೋಗ್ಯ ಪಾಲನೆಗೆ ಸಹಕಾರಿಯಾಗಬೇಕು ಎಂದರು.

ದೇಶದ ವಿವಿಧ ರಾಜ್ಯಗಳಿಂದ 550 ಪ್ರತಿನಿಧಿಗಳು 30 ಆರೋಗ್ಯ ವಿಜ್ಞಾನ ಸಂಸ್ಥೆಗಳಿಂದ ಭಾಗವಹಿಸಿದ್ದರು. ಅಂದಾಜು 210 ಸಂಶೋಧನಾ ಪ್ರಬಂಧಗಳ ಮಂಡನೆ, 30 ಸಂಶೋಧನಾ ಪೋಸ್ಟರ್ ಪ್ರದರ್ಶಿಸಲಾಯಿತು.

ಸಂಘಟನಾ ಕಾರ್ಯದರ್ಶಿ ಡಾ.ವೀಣಾ ಜಿ.ರಾವ್, ಡಾ.ಆರ್.ಸುಮಾ, ಡಾ.ಬಿ.ಜೆ.ಮಧುಸೂದನ್ ಇನ್ನಿತರರಿದ್ದರು.