ಚನ್ನರಾಯಪಟ್ಟಣ: ಸಾರಿಗೆ ಸಿಬ್ಬಂದಿಯ ಒತ್ತಡ ನಿವಾರಣೆಗೆ ಹಾಗೂ ಸಿಬ್ಬಂದಿಯಲ್ಲಿ ಕ್ರೀಡಾ ಆಸಕ್ತಿ ಹೆಚ್ಚಿಸುವ ಉದ್ದೇಶದಿಂದ ಪ್ರತಿ ವರ್ಷ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಎನ್. ಅರುಣ್ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಸನ ವಿಭಾಗದ ಚನ್ನರಾಯಪಟ್ಟಣ ಘಟಕದ ಸರದಿಯಲ್ಲಿ ಕೆಎಸ್‌ಆರ್‌ಟಿಸಿ ಹಾಸನ ವಿಭಾಗ ಮಟ್ಟದ ಕ್ರಿಕೆಟ್ ಪ್ರೀಮಿಯರ್ ಲೀಗ್-2023ರ ಎರಡು ದಿನಗಳ ಕ್ರಿಕೆಟ್ ಪಂದ್ಯಾವಳಿಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸಾರಿಗೆ ಸಂಸ್ಥೆಯು ದಿನದ 24 ಗಂಟೆಗಳ 365 ದಿನ ಕಾರ್ಯಾಚರಣೆಯಲ್ಲಿ ನಿರತವಾಗಿರುವ ಸೇವಾ ಸಂಸ್ಥೆಯಾಗಿದ್ದು, ಸಿಬ್ಬಂದಿ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಿಬ್ಬಂದಿಯ ಒತ್ತಡ ನಿವಾರಣೆಗೆ ಮನೋಲ್ಲಾಸ ಹೆಚ್ಚಿಸಲು, ಕ್ರೀಡೆಗಳಲ್ಲಿ ಆಸಕ್ತಿ ಮೂಡಿಸಲು ಪ್ರತಿವರ್ಷದಂತೆ ಈ ವರ್ಷವೂ ಚನ್ನರಾಯಪಟ್ಟಣ ಘಟಕದ ಸರದಿಯಂತೆ ಕ್ರಿಕೆಟ್ ಪಂದ್ಯವನ್ನು ಆಯೋಜಿಸಿದ್ದು, ಇಂತಹ ಕ್ರೀಡೆಗಳನ್ನು ಆಯೋಜಿಸುವುದರಿಂದ ಸಿಬ್ಬಂದಿಯಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯ ಅತ್ಯಂತ ಉತ್ಕೃಷ್ಟವಾಗಿರುತ್ತದೆ ಎಂದು ತಿಳಿಸಿದರು.
ಯಾರು ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೊಂದಿರುತ್ತಾರೋ ತಮ್ಮ ಜೀವನದ ಎಲ್ಲ ಕಾರ್ಯಗಳಲ್ಲಿ ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಾರೆ. ಕ್ರೀಡೆಗಳಿಂದ ಪರಸ್ಪರ ಪ್ರೀತಿ, ಪ್ರೇಮ ಹಾಗೂ ಸೌಹಾರ್ದತೆಯಿಂದ ಬಾಳಲು ಸಹಕಾರಿಯಾಗುತ್ತದೆ. ಅಲ್ಲದೆ, ಕ್ರಿಕೆಟ್ ಅಂತಾರಾಷ್ಟ್ರೀಯ ಆಟವಾಗಿರುವುದರಿಂದ ಉತ್ತಮ ಪ್ರತಿಭೆ ಪ್ರದರ್ಶಸಿದ್ದೇ ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವ ಅವಕಾಶ ನಿಮ್ಮದಾಗಿರುತ್ತದೆ ಎಂದು ಉತ್ಸಾಹ ತುಂಬಿದರು.
ಹಾಸನ ವಿಭಾಗದ ಆರು ಘಟಕಗಳಿಂದ ಆರು ತಂಡ, ಡಿ ಡಬ್ಲುೃಎಸ್‌ನಿಂದ ಒಂದು ತಂಡ, ಆರ್‌ಡಬ್ಲುೃಎಸ್‌ನಿಂದ ಒಂದು ತಂಡ, ಭದ್ರತಾ ವಿಭಾಗದಿಂದ ಒಂದು ತಂಡ, ವಿಭಾಗೀಯ ಕಚೇರಿಯಿಂದ ಒಂದು ತಂಡ ಸೇರಿದಂತೆ ಒಟ್ಟು 10 ತಂಡಗಳು ಭಾಗವಹಿಸಿದ್ದು, ಎಲ್ಲ ತಂಡಗಳ ಕ್ರೀಡಾಪಟುಗಳು ಕ್ರೀಡಾ ಸಮವಸ್ತ್ರದಲ್ಲಿದ್ದರು.
ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ 11,111 ರೂಪಾಯಿ ಮತ್ತು ಟ್ರೋಫಿ, ದ್ವಿತೀಯ ಬಹುಮಾನ 4,444 ರೂಪಾಯಿ ಮತ್ತು ಟ್ರೋಫಿ, ತೃತೀಯ ಬಹುಮಾನ 3,333 ರೂಪಾಯಿ ಮತ್ತು ಟ್ರೋಫಿ, ಸಮಾಧಾನಕರ ಬಹುಮಾನ 2,222 ಮತ್ತು ಟ್ರೋಫಿ. ಅಲ್ಲದೆ, ಸರಣಿ ಶ್ರೇಷ್ಠ, ಉತ್ತಮ ಬೌಲರ್, ಉತ್ತಮ ಬ್ಯಾಟ್ಸ್‌ಮನ್ ಟ್ರೋಫಿ ನೀಡಲಾಗುವುದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಭಾಗೀಯ ಸಂಚಲನಾಧಿಕಾರಿ ವಿ.ಸತೀಶ್, ತಾಂತ್ರಿಕ ಶಿಲ್ಪಿ ನಂದಕುಮಾರ್, ಕಾರ್ಮಿಕ ಕಲ್ಯಾಣ ಅಧಿಕಾರಿ ಕೆ.ಟಿ. ರವಿ, ಸಹಾಯಕ ಆಡಳಿತ ಅಧಿಕಾರಿ ಚೆಲುವರಾಜು, ಸಹಾಯಕ ಲೆಕ್ಕಾಧಿಕಾರಿ ಜಯಂತ್ ಆರ್., ಘಟಕ ವ್ಯವಸ್ಥಾಪಕರಾದ ವ್ಯವಸ್ಥಾಪಕರಾದ ಶಾಜೀಯ ಬಾನು, ಶಾಂತಕುಮಾರ್, ಹನುಮಂತಪ್ಪ, ಸಂಚಾರ ನಿರೀಕ್ಷಕ ಕೃಪಾಕರ್, ಆಯೋಜಕರಾದ ಲಕ್ಷ್ಮೇಗೌಡ, ಮಧು, ಚಿದಾನಂದ, ಅಲಾವುದ್ದೀನ್ ನದಾಫ್ ಇತರರು ಉಪಸ್ಥಿತರಿದ್ದರು.