ಜಿಲ್ಲೆ

ಒಣ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣಕ್ಕೆ ಭೂಮಿ ಪೂಜೆ

ಹಾಸನ: ಸ್ವಚ್ಛ ಭಾರತ್ ಮಿಷನ್ ಹಂತ -2ರ ಯೋಜನೆ ಅಡಿಯಲ್ಲಿ ಹಾಸನ ತಾಲೂಕು ಹನುಮಂತಪುರ ಬಳಿ 1.5 ಕೋಟಿ ರೂ.ವೆಚ್ಚದ ಒಣ ತ್ಯಾಜ್ಯ ಸಂಪೂರ್ಣ ನಿರ್ವಹಣಾ ಘಟಕ ನಿರ್ಮಾಣಕ್ಕೆ ಶುಕ್ರವಾರ ಶಾಸಕ ಸ್ವರೂಪ ಪ್ರಕಾಶ್ ಭೂಮಿ ಪೂಜೆ ನೆರವೇರಿಸಿದರು. ಭೂಮಿ ಪೂಜೆ ಅಂಗವಾಗಿ ಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಬಳಿಕ ಶಾಸಕ ಸ್ವರೂಪ್ ಪ್ರಕಾಶ್ ಮಾತನಾಡಿ, ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಕಸದ ನಿರ್ವಹಣೆಗಾಗಿ ಜಿಲ್ಲಾ ಪಂಚಾಯಿತಿ ಮೂಲಕ ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆ ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರುವ ಕಸದ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ಕೆಲಸ ಮಾಡಲಿದೆ. ಹಾಸನ ನಗರದ ನಿವಾಸಿಗಳು ಕೂಡ ಸಹಕಾರ ನೀಡಬೇಕು. ಈಗಾಗಲೇ ಒಣ ಕಸ ಹಾಗೂ ಹಸಿ ಕಸವನ್ನು ಬೇರ್ಪಡಿಸಿ ಕಸದ ವಾಹನದಲ್ಲೇ ಹಾಕಬೇಕು ಎಂಬ ನಿಯಮವಿದೆ. ಅದನ್ನು ಕಡ್ಡಾಯವಾಗಿ ಪಾಲನೆ ಮಾಡುವ ಮೂಲಕ ಹಾಸನ ನಗರವನ್ನು ಸ್ವಚ್ಛ ಹಾಗು ಸುಂದರವಾಗಿಸಲು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಯಥೇಚ್ಛವಾದ ಕಸದ ಸಮಸ್ಯೆಯಿಂದಲೇ ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಸಮಸ್ಯೆಗಳು ಕಂಡುಬರುತ್ತಿದೆ. ಅವುಗಳ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯ ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಕಸದ ವಾಹನದಲ್ಲೇ ಹಾಕಿ ನಗರಸಭೆಯೊಂದಿಗೆ ಕೈಜೋಡಿಸುವ ಮೂಲಕ ಸ್ವಚ್ಛ ಭಾರತ ಅಭಿಯಾನಕ್ಕೆ ಮುಂದಾಗೋಣ ಎಂದು ಕರೆ ನೀಡಿದರು
ಇದೆ ವೇಳೆ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಿ ಕಸದ ನಿರ್ವಹಣೆಗೆ ಅನುಕೂಲ ಕಲ್ಪಿಸಬೇಕು. ಸುತ್ತಮುತ್ತಲ ಜನರಿಗೂ ಸಮಸ್ಯೆಯಾಗದಂತೆ ರಕ್ಷಣಾತ್ಮಕವಾಗಿ ಕಾಮಗಾರಿ ನಡೆಸಬೇಕು ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಶಾಸಕ ಸ್ವರೂಪ್ ಸೂಚನೆ ನೀಡಿದರು.
ಈ ವೇಳೆ ನಗರಸಭೆ ಅಧ್ಯಕ್ಷ ಚಂದ್ರೇಗೌಡ, ಉಪಾಧ್ಯಕ್ಷರಾದ ಲತಾ ದೇವಿ ಸುರೇಶ್, ಕೆಆರ್‌ಡಿಎಲ್ ಇಂಜಿನಿಯರ್ ನವ್ಯಶ್ರೀ, ಅಣ್ಣಯ್ಯ, ಆಗಿಲೆ ಗ್ರಾಮದ ಮುಖಂಡ ಮೊಗಣ್ಣ, ಹೊನ್ನೇಗೌಡ, ಮಾರಗೋಡನಹಳ್ಳಿ ರಾಜಣ್ಣ, ಹನುಮಂತಪುರ ರಾಮಚಂದ್ರ, ಜಗದೀಶ್ , ಬಿದರೆಕೆರೆ ಜಯರಾಮ್, ನಾಗೇಶ್ ಬಿಟ್ಟ ಗೌಡನಹಳ್ಳಿ, ರಾಜಣ್ಣ ಇತರರು ಇದ್ದರು.