ಶ್ರೀರಂಗಪಟ್ಟಣ: ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಗುರುವಾರ ಪಟ್ಟಣದ ಸ್ನಾನಘಟ್ಟದ ಕಾವೇರಿ ನದಿ ತೀರದಿಂದ ಒಣಗಿದ ಕಬ್ಬು ಹಿಡಿದು ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿದರು.
ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ ನೀರು ನಿಲ್ಲಿಸುವ ಮನಸ್ಥಿತಿಯೇ ರಾಜ್ಯ ಸರ್ಕಾರಕ್ಕೆ ಇಲ್ಲವಾಗಿದೆ. ಕಾವೇರಿ ಕೊಳ್ಳದ ರೈತರ ಪಾಲಿಗೆ ಮರಣ ಶಾಸನ ಬರೆದ ಕಾಂಗ್ರೆಸ್ ಪಕ್ಷದ ಅಸಮರ್ಥ ಜನಪ್ರತಿನಿಧಿಗಳ ವಿರುದ್ಧ ಹೋರಾಟಕ್ಕೆ ನಾವು ಸಿದ್ಧರಾಗಬೇಕು ಎಂದು ಕರೆನೀಡಿದರು.
ಮಂಡ್ಯ ಜಿಲ್ಲೆ ಸೇರಿದಂತೆ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿರುವ ಕಬ್ಬು, ಭತ್ತ ಸೇರಿದಂತೆ ಇನ್ನಿತರ ಬೆಳೆಗಳಿಗೆ ತಿಂಗಳಲ್ಲಿ 1 ಕಟ್ಟು ನೀರು ನೀಡಿದರೂ ಉಳಿಸಿಕೊಳ್ಳುವುದು ಕಷ್ಟ. ಕಾವೇರಿ ನೀರು ಸ್ಥಗಿತಗೊಳಿಸುವ ವಿಚಾರವಾಗಿ ಕೆಲ ಕನ್ನಡಪರ, ಪ್ರಗತಿಪರ ಸಂಘಟನೆಗಳು ಹಾಗೂ ಕಾವೇರಿ ಕಣಿವೆಯ ರೈತರು ಮಾತ್ರ ಹೋರಾಟ ನಡೆಸಿ ನಂತರ ಸುಮ್ಮನಾಗುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ಭಾವಿಸಿದ್ದಾರೆ. ಕಾಂಗ್ರೆಸ್‌ನ ಜನಪ್ರತಿನಿಧಿಗಳು ಸಿಕ್ಕಲ್ಲಿ ಸಿಕ್ಕಲ್ಲಿ ಅವರನ್ನು ಹಿಡಿದು ಪ್ರಶ್ನಿಸಿ ಹೋರಾಟ ಮಾಡುವ ಕಾಲ ದೂರವಿಲ್ಲ ಎಂದರು.
ಭೂಮಿತಾಯಿ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ವಿ.ಕೃಷ್ಣ, ಖಜಾಂಚಿ ಉಂಡುವಾಡಿ ಮಹದೇವು, ಉಪಾಧ್ಯಕ್ಷ ಹನಿಯಂಬಾಡಿ ನಾಗರಾಜು, ಮೇಳಾಪುರ ಜಯರಾಮೇಗೌಡ, ಸಂಚಾಲಕ ಬಿ.ಮಂಜುನಾಥ್, ಸುನೀಲ್, ಬಾಬು, ಮಹಾಲಿಂಗು, ಕಪರನಕೊಪ್ಪಲು ಸುರೇಶ್, ಮೊಳ್ಳೆನಹಳ್ಳಿ ಚಂದ್ರು, ನೀಲನಕೊಪ್ಪಲು ಭದ್ರಣ್ಣ, ಪುಟ್ಟಸ್ವಾಮಿ, ಬಲ್ಲೇನಹಳ್ಳಿ ಮಹೇಶ್, ಹೆಬ್ಬಾಡಿಹುಂಡಿ ಸಿದ್ದೇಗೌಡ, ಕಡತನಾಳು ಚಾಮರಾಜು ಇತರರಿದ್ದರು.