ಶೃಂಗೇರಿ: ತಾಲೂಕಿನಲ್ಲಿ ಹಲವಾರು ಕಡೆ ಒಡೆಯರ ಮಠವಿತ್ತು ಎಂಬುದು ಐತಿಹ್ಯ.
ಬಿದರಗೋಡಿನಿಂದ ಸುಮಾರು ಮೂರು ಕಿ.ಮೀ ದೂರದಲ್ಲಿರುವ ಪ್ರದೇಶ ಒಡೆಯರ ಮಠ ಎಂಬ ಶಬ್ದಕ್ಕೆ ಹಲವಾರು ಅರ್ಥಗಳಿವೆ. 15-16ನೇ ಶತಮಾನದಲ್ಲಿ ಕೆಳದಿ ನಾಯಕರ ಕಾಲದಿಂದ ಒಡೆಯರ ಮಠ ಶಬ್ದ ಬಳಕೆಗೆ ಬಂದಿರಬಹುದು ಎಂಬ ಅಭಿಪ್ರಾಯವನ್ನು ತಜ್ಞರು ತಿಳಿಸಿದ್ದಾರೆ. ಈ ಕುರಿತು ಇತಿಹಾಸ ತಜ್ಞ ಪ್ರೊ. ರಾಮಚಂದ್ರರಾವ್ ಅವರು ಅಧ್ಯಯನ ಮಾಡಿದ್ದು, ಇಲ್ಲಿರುವ ಒಡೆಯರ ಮಠದ ಪ್ರದೇಶವನ್ನು 13-14ನೇ ಶತಮಾನದಲ್ಲಿ ಸೋಮಪುರ ಎಂದು ಕರೆಯಲಾಗುತ್ತಿತ್ತು. ಅಲ್ಲಿ ಶ್ರೀ ಸೋಮನಾಥೇಶ್ವರ ದೇವಾಲಯವಿದೆ. ಅದನ್ನು ಕೋಟೆ ಸೋಮೇಶ್ವರ ಎಂದು ಕೂಡ ಕರೆಲಾಗುತ್ತಿತ್ತು. ಮುಂದೆ ಒಡೆಯರ ಮಠ ಪ್ರಸಿದ್ಧಿಗೆ ಬಂದಾಗ ಅದರ ಪ್ರಭಾವದಿಮದ ಸೋಮಪುರ ಬದಲಾಗಿ ಒಡೆಯರ ಮಠ ಎಂದು ಪ್ರಸಿದ್ಧಿಗೆ ಬಂದಿದೆ ಎಂದು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ಸೋಮನಾಥ ದೇವಾಲಯ ಅವನತಿ ಹೊಂದಿದ್ದಾಗ ಅಲ್ಲಿದ್ದ ನಂದಿಯನ್ನು ಈ ಸ್ಥಳಕ್ಕೆ ತಂದಿದ್ದಾರೆ. ವಿಶೇಷವೆಂದರೆ ಇಲ್ಲಿ ಗದ್ದೆಯೊಂದರಲ್ಲಿ ಮೂರಡಿ ಕಲ್ಲುಕಂಬದ ಮೇಲೆ ಸುಂದರವಾದ ಬಸವನ ಸ್ಮಾರಕವಿದೆ. ಇಂದಿಗೂ ಈ ಗದ್ದೆಯ ಹೆಸರು ಬಸವನಹಾಳಿ ಎಂದಿದೆ. ಮತ್ತೊಂದು ಅಭಿಪ್ರಾಯದ ಪ್ರಕಾರ ಇದು ಸಿದ್ಧಪುರುಷರ ಅಥವಾ ಪುಣ್ಯ ಪುರುಷರ ಸಮಾಧಿ ಇರಬಹುದು ಎಂಬ ಅಭಿಪ್ರಾಯ ಇದೆ. ಸ್ಥಳೀಯರು ಈ ಪ್ರದೇಶದಲ್ಲಿ ಬಸವನಿಗೆ ದೇವಾಲಯ ನಿರ್ಮಿಸುವ ಯೋಜನೆ ಹಮ್ಮಿಕೊಂಡರು. ಅದು ಇಂದಿಗೂ ಕೈಗೂಡಲಿಲ್ಲ ಎಂಬುದು ಸ್ಥಳೀಯ ಕೃಷಿಕ ಬಿ.ವಿ.ಗೋಪಾಲ್ ರಾವ್ ಹಾಗೂ ಇತಿಹಾಸ ತಜ್ಞ ಸುರೇಶ್ ಕಲ್ಕೆರೆ ಅವರ ಅಭಿಮತ.