ಜಿಲ್ಲೆ

ಒಡೆದಾಳುವ ಸರ್ಕಾರದ ವಿರುದ್ಧ ಯಾತ್ರೆ

ಕೆ.ಆರ್.ನಗರ: ಜಾತ್ಯತೀತ ರಾಷ್ಟ್ರವನ್ನು ಒಡೆದಾಳಲು ಹೊರಟಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ವರಿಷ್ಠ ರಾಹುಲ್‌ಗಾಂಧಿ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆ ಅ.2 ರಂದು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಆಗಮಿಸಲಿದ್ದು ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಿಂದ ಕನಿಷ್ಠ 5 ಸಾವಿರ ಕಾರ್ಯಕರ್ತರು ಪಾಲ್ಗೊಳ್ಳಬೇಕೆಂದು ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಮತ್ತು ಶಾಸಕ ರೋಜಿಜಾನ್ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಭಾರತ್ ಜೋಡೋ ಯಾತ್ರೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ 3,071 ಕಿ.ಮೀ. ಪಾದಯಾತ್ರೆ ನಡೆಸುತ್ತಿದ್ದು, ಇದಕ್ಕೆ ರಾಷ್ಟ್ರಾಭಿಮಾನಿಗಳು ಸಹಕಾರ ನೀಡಬೇಕು ಎಂದರು.
ಕರ್ನಾಟಕದಲ್ಲಿ 511 ಕಿ.ಮೀ. ಪಾದಯಾತ್ರೆ ಸಾಗಲಿದೆ. ಶೇ.40 ಕಮಿಷನ್ ಪಡೆಯುತ್ತಿರುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲು ಪಕ್ಷ ಹೋರಾಟ ಮಾಡುತ್ತಿದೆ. ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮಾತನಾಡಿ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಿಂದ ಡಿ.ರವಿಶಂಕರ್ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡುವುದೇ ಪ್ರಮುಖ ಗುರಿಯಾಗಿದೆ. ಮುಂದಿನ ವಿಧಾನಸಭೆಯ ಚುನಾವಣೆಯನ್ನು ನಾನೇ ಮುನ್ನಡೆಸಲಿದ್ದೇನೆ ಎಂದು ಹೇಳಿದರು.
ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಮಾತನಾಡಿದರು. ಕೆಪಿಸಿಸಿ ಸದಸ್ಯ ಎಸ್.ಪಿ.ತಮ್ಮಯ್ಯ, ಪುರಸಭೆ ಅಧ್ಯಕ್ಷ ಕೋಳಿಪ್ರಕಾಶ್, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ, ಕಾಂಗ್ರೆಸ್ ಮುಖಂಡ ಡಿ.ರವಿಶಂಕರ್, ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಜಿಪಂ ಮಾಜಿ ಸದಸ್ಯ ಮಾರ್ಚಳ್ಳಿ ಶಿವರಾಮು, ಟಿಎಪಿಸಿಎಂಎಸ್ ನಿರ್ದೇಶಕ ತೋಟಪ್ಪನಾಯಕ, ಮುಖಂಡರಾದ ಸಿ.ಪಿ.ರಮೇಶ್, ಎಚ್.ಪಿ.ಪ್ರಶಾಂತ್, ವೈ.ಎಸ್. ಕುಮಾರ್, ಕಲ್ಲಹಳ್ಳಿ ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ಉದಯಶಂಕರ್, ವಕ್ತಾರ ಸೈಯದ್ ಜಾಬೀರ್ ಇತರರು ಹಾಜರಿದ್ದರು.