ಗುಂಡ್ಲುಪೇಟೆ: ಒಡಿಶಾದ ಬಾಲಸೋರ್‌ನಲ್ಲಿ ಶುಕ್ರವಾರ ರಾತ್ರಿ ನಡೆದ ತ್ರಿವಳಿ ರೈಲು ಅಪಘಾತದಲ್ಲಿ 288 ಮಂದಿ ಸಾವಿಗೀಡಾಗಿ ಸುಮಾರು 800ಕ್ಕೂ ಹೆಚ್ಚು ಜನ ಗಾಯಗೊಂಡಿದ್ದ ಘಟನೆಯಲ್ಲಿ ತಾಲೂಕಿನ ಇಬ್ಬರು ಯುವಕರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ಅಪಘಾತಕ್ಕೀಡಾದ ರೈಲಿನಲ್ಲಿ ತಾಲೂಕಿನ ಬೊಮ್ಮಲಾಪುರ ಗ್ರಾಮದ ಮಹೇಶ್ ಹಾಗೂ ಪವನ್ ಎಂಬ ಯುವಕರು ಸೇನಾ ಪರೀಕ್ಷೆಗೆಂದು ತೆರಳಿದ್ದರು. ಈ ವೇಳೆ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಇಬ್ಬರಿಗೂ ಯಾವುದೇ ಗಾಯವಾಗಿಲ್ಲ. ಆದರೆ ತವರಿಗೆ ಮರಳಲು ರೈಲು ಸಿಗದೇ ಪರದಾಡುತ್ತಿದ್ದಾರೆ.
ಅಪಘಾತವಾದ ರೈಲಿನಲ್ಲಿದ್ದ ಕರ್ನಾಟಕದ ಪ್ರಯಾಣಿಕರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲು ಹೋಗಿರುವ ಸಚಿವ ಸಂತೋಷ್ ಲಾಡ್ ಅವರೊಟ್ಟಿಗೆ ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ದೂರವಾಣಿ ಕರೆ ಮಾಡಿ ಮಾತನಾಡಿದ್ದು, ಯುವಕರಿಗೆ ಅಗತ್ಯವಾದ ನೆರವು ಕೊಡಿಸಿದ್ದಾರೆ. ಖರ್ಚು ವೆಚ್ಚಕ್ಕೆ ಬೇಕಾದ ಹಣವನ್ನು ನೆಟ್‌ಬ್ಯಾಂಕಿಂಗ್ ಮೂಲಕ ಅವರ ಖಾತೆಗೆ ರವಾನಿಸಿ, ಪರ್ಯಾಯ ಮಾರ್ಗದಲ್ಲಿ ರಾಜ್ಯಕ್ಕೆ ಹಿಂತಿರುಗುವಂತೆ ಯುವಕರಿಗೆ ಸಲಹೆ ಕೊಟ್ಟಿದ್ದಾರೆ.
ಸೇನೆಯ ಪರೀಕ್ಷೆ ಬರೆಯಲು ಬಂದಿದ್ದೆವು. ರೈಲುಗಳು ರದ್ದಾಗಿದ್ದು, ಬೇರೆ ಮಾರ್ಗದಲ್ಲಿ ರಾಜ್ಯ ತಲುಪಬೇಕಿದೆ. ಶಾಸಕರು ಹಾಗೂ ಸಚಿವರು ತಮಗೆ ನೆರವಾಗುವ ಮೂಲಕ ಸಹಾಯ ಮಾಡಿದ್ದಾರೆ ಎಂದು ಯುವಕರು ಸಂತಸ ವ್ಯಕ್ತಪಡಿಸಿದ್ದಾರೆ.