ಜಿಲ್ಲೆ

ಒಟ್ಟಾಗಿ ಇರಿ ಗೆಲುವಿನ ನಗೆ ಬೀರಿ

ಬಸವಕಲ್ಯಾಣ: ಶೀಘ್ರದಲ್ಲಿ ನಡೆಯಲಿರುವ ಉಪ ಚುನಾವಣೆಗಾಗಿ ಬಿಜೆಪಿಯಲ್ಲಿ ಚಟುವಟಿಕೆ ಚುರುಕುಗೊಂಡಿವೆ. ಕ್ಷೇತ್ರದಲ್ಲಿ ಕಮಲ ಧ್ವಜ ಹಾರಿಸುವ ನಿಟ್ಟಿನಲ್ಲಿ ರಣತಂತ್ರ ರೂಪಿಸಲು ಕ್ಷೇತ್ರದ ಚುನಾವಣಾ ಉಸ್ತುವಾರಿ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು ಮತ್ತು ಪಕ್ಷದ ಮುಖಂಡರ ಮಹತ್ವದ ಸಭೆ ಬುಧವಾರ ಜರುಗಿದೆ.

ಪಕ್ಷದ ಟಿಕೆಟ್ ಬಯಸಿ ಕಸರತ್ತು ನಡೆಸುತ್ತಿರುವ 17ಕ್ಕೂ ಹೆಚ್ಚಿನ ಆಕಾಂಕ್ಷಿಗಳು ಸಭೆಯಲ್ಲಿ ಭಾಗವಹಿಸಿ ಚುನಾವಣಾ ಉಸ್ತುವಾರಿಗಳೊಂದಿಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡರು. ಈ ವೇಳೆ ಸವದಿ ಅವರು ಆಕಾಂಕ್ಷಿಗಳಿಗೆ ಒಗ್ಗಟ್ಟಿನ ಪಾಠ ಹೇಳಿದರು.

ಆಕಾಂಕ್ಷಿಗಳು ತಾವು ಮಾಡುತ್ತಿರುವ ಕೆಲಸ, ಪಕ್ಷದಲ್ಲಿ ನಿರ್ವಹಿಸಿದ ಜವಾಬ್ದಾರಿ, ರಾಜಕೀಯ ಅನುಭವ ಸೇರಿ ಇತರ ಮಾಹಿತಿ ನೀಡಿದರು. ಟಿಕೆಟ್ ಬಯಸಿ ಹಲವರು ಮನವಿ ಮಾಡುವುದು ಸಹಜ. ಆಕಾಂಕ್ಷಿಗಳ ವಿವರ ಪಕ್ಷದ ವರಿಷ್ಠರಿಗೆ ಕಳಿಸಲಾಗವುದು. ಟಿಕೆಟ್ ಯಾರಿಗೆ ಎಂಬುದನ್ನು ವರಿಷ್ಠರೇ ತೀರ್ಮಾನಿಸುತ್ತಾರೆ. ಯಾವುದೇ ತೀರ್ಮಾನ ತೆಗೆದುಕೊಂಡರೂ ಎಲ್ಲರೂ ಬದ್ಧರಾಗಿರಬೇಕು. ಪಕ್ಷ ಸೂಚಿಸುವ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ಸವದಿ ಸೂಚಿಸಿದರು.

ಬಿಜೆಪಿ ಅಭ್ಯರ್ಥಿ ಗೆಲ್ಲಿಸುವುದೇ ನಮ್ಮೆಲ್ಲರ ಮೊದಲ ಆದ್ಯತೆ. ಹೀಗಾಗಿ ಯಾವುದೇ ಭಿನ್ನಾಭಿಪ್ರಾಯ ಇಟ್ಟುಕೊಳ್ಳದೆ, ಕಚ್ಚಾಟಕ್ಕೆ ಆಸ್ಪದ ನೀಡದೆ ಪಕ್ಷದ ಹಿತದೃಷ್ಟಿಯಿಂದ ಎಲ್ಲ ಆಕಾಂಕ್ಷಿಗಳು ಮತ್ತು ಪಕ್ಷದ ಮುಖಂಡರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್, ವಸತಿ ಸಚಿವ ವಿ. ಸೋಮಣ್ಣ, ಸಂಸದ ಭಗವಂತ ಖೂಬಾ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್, ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ, ವಿಭಾಗ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್, ಮಾಜಿ ಶಾಸಕ ಅಮರನಾಥ ಪಾಟೀಲ್, ಬಿಜೆಪಿ ಜಿಲ್ಯಾಧ್ಯಕ್ಷ ಶಿವಾನಂದ ಮಂಠಾಳಕರ್, ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಕುಂಬಾರ, ಅಶೋಕ ಹೊಕ್ರಾಣೆ ಅರಹಂತ ಸಾವಳೆ, ರಾಜ್ಯ ಕಾರ್ಯಕಾರಿಣಿ ಆಹ್ವಾನಿತ ಸದಸ್ಯ ದೀಪಕ ಗಾಯಕವಾಡ, ಪ್ರಮುಖರಾದ ಸೂರ್ಯಕಾಂತ ನಾಗಮಾರಪಳ್ಳಿ, ಬಸವರಾಜ ಆರ್ಯ, ತಾಲೂಕು ಗ್ರಾಮೀಣ ಘಟಕದ ಅಧ್ಯಕ್ಷ ಅಶೋಕ ವಕಾರೆ, ನಗರ ಘಟಕದ ಅಧ್ಯಕ್ಷ ಕೃಷ್ಣಾ ಗೋಣೆ ಇತರರಿದ್ದರು.

ಆಕಾಂಕ್ಷಿಗಳಿಂದ ಮಾಹಿತಿ ಪಡೆದ ಡಿಸಿಎಂ
ಸಭೆಯಲ್ಲಿ ಬಸವಕಲ್ಯಾಣ ಕ್ಷೇತ್ರದ 17ಕ್ಕೂ ಹೆಚ್ಚು ಆಕಾಂಕ್ಷಿಗಳು ಅಭಿಪ್ರಾಯ ಹಂಚಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಡಿಸಿಎಂ ಸವದಿ ಎಲ್ಲ ಮಗ್ಗುಲಗಳಿಂದಲೂ ಆಕಾಂಕ್ಷಿಗಳಿಂದ ಮಾಹಿತಿ ಕಲೆ ಹಾಕಿದ್ದಾರೆ. ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಮುಖಂಡರಾದ ಸಂಜಯ ಪಟವಾರಿ, ಸೂರ್ಯಕಾಂತ ನಾಗಮಾರಪಳ್ಳಿ, ಗುಂಡುರೆಡ್ಡಿ, ಸುಧೀರ ಕಾಡಾದಿ, ಶರಣು ಸಲಗರ್, ಪ್ರದೀಪ ವಾತಡೆ, ಉಮೇಶ ಬಿರಬಿಟ್ಟೆ, ರವಿ ಚಂದನಕೆರೆ, ಅನೀಲ ಭೂಸಾರೆ, ವಿಜಯಕುಮಾರ ಮಂಠಾಳೆ, ಪದ್ಮಾಕರ ಪಾಟೀಲ್, ಸೂರ್ಯಕಾಂತ ಚಿಲ್ಲಾಬಟ್ಟೆ, ಲತಾ ಹಾರಕೂಡೆ, ಶಾಲಿನಿ ವಾಡೇಕರ್, ಅರವಿಂದ ಮುತ್ತೆ, ಡಾ.ಬಸವರಾಜ ಸ್ವಾಮಿ ಇತರ ಆಕಾಂಕ್ಷಿಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡರು.

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ಬಸವಕಲ್ಯಾಣ ಉಪ ಚುನಾವಣೆ ಕುರಿತು ಸಭೆ ನಡೆದಿದೆ. ಒಗ್ಗಟ್ಟಾಗಿ ಚುನಾವಣೆ ಎದುರಿಸಿ ಗೆಲುವಿನ ನಗೆ ಬೀರಲು ಸುದೀರ್ಘ ಸಮಾಲೋಚನೆ ನಡೆಸಲಾಗಿದೆ. ಕ್ಷೇತ್ರದಲ್ಲಿ ಕಮಲ ಅರಳುವುದು ಗ್ಯಾರಂಟಿ.| ಪ್ರಭು ಚವ್ಹಾಣ್ಜಿಲ್ಲಾ ಉಸ್ತುವಾರಿ ಸಚಿವ