ಬೇಲೂರು: ರಾಜ್ಯದ ಕೆಲವೆಡೆ ಚುನಾವಣೆಗೆ ಅಭ್ಯರ್ಥಿಗಳ ಹುಡುಕಾಟ ನಡೆಯುತ್ತಿದೆ. ಅದರೆ, ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಆಕಾಂಕ್ಷಿಗಳಿಂದ ಬಿಜೆಪಿಗೆ ಆನೆಬಲ ಬಂದಿದ್ದು, ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಬಿಜೆಪಿ ಜಯಭೇರಿ ಬಾರಿಸುತ್ತದೆ ಎಂದು ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಹೇಳಿದರು.
ಬೇಲೂರು ಪಟ್ಟಣದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಪರಿಶೀಲನಾ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಹಾಸನ ಜಿಲ್ಲೆಯಲ್ಲಿ ಬಿಜೆಪಿಗೆ ಮೊದಲು ಗೆಲುವು ಬೇಲೂರು ವಿಧಾನಸಭಾ ಕ್ಷೇತ್ರವಾಗಿದೆ. ಆದ್ದರಿಂದ ಮುಖಂಡರು ಒಂದಾಗಿ ಪ್ರತಿ ಮನೆಗೂ ಭೇಟಿ ನೀಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಪರ ಯೋಜನೆಯನ್ನು ತಿಳಿಸಿದಾಗ ಮಾತ್ರ ಗೆಲುವು ಅತ್ಯಂತ ಸುಲಭವಾಗಲಿದೆ. ವಿಶೇಷವಾಗಿ ಪ್ರತಿಯೊಬ್ಬ ಮುಖಂಡರು ಬೂತ್‌ಮಟ್ಟದ ಕಾರ್ಯಕರ್ತರ ಸಂಪರ್ಕ ಹೊಂದಿರಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಕೆ.ಸುರೇಶ್ ಮಾತನಾಡಿ, ಹಳೇ ಮೈಸೂರು ಭಾಗ ಜೆಡಿಎಸ್ ಭದ್ರಕೋಟೆ ಎಂದು ಬಿಂಬಿತವಾಗಿತ್ತು. ಆದರೆ, 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆಯನ್ನು ಛಿದ್ರಿಸುವ ಮೂಲಕ ಬಿಜೆಪಿ ಅತಿ ಹೆಚ್ಚು ಸ್ಥಾನ ಗಳಿಸಲಿದೆ. ಹಾಸನ ಜಿಲ್ಲೆಯಲ್ಲಿ ಕಳೆದ ಚುನಾವಣೆಯಲ್ಲಿ ಒಂದು ಕ್ಷೇತ್ರ ಗೆದ್ದಿತ್ತು. ಆದರೆ, ಈ ಬಾರಿ ಜಿಲ್ಲೆಯಲ್ಲಿ 4ರಿಂದ 5 ಸ್ಥಾನ ಗೆಲ್ಲುವಲ್ಲಿ ಸಂಶಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಬಿಜೆಪಿ ಕೋಶಾಧ್ಯಕ್ಷೆ ಡಾ.ಸುರಭಿ ರಘು, ಜಿಲ್ಲಾ ಉಪಾಧ್ಯಕ್ಷ ಕೊರಟಿಕೆರೆ ಪ್ರಕಾಶ್, ತಾಲೂಕು ಅಧ್ಯಕ್ಷ ಅಡಗೂರು ಆನಂದ್, ಮುಖಂಡರಾದ ರೇಣು ಕುಮಾರ್, ಸಿದ್ದೇಶ್ ನಾಗೇಂದ್ರ, ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್, ಬಿ.ಕೆ. ಚಂದ್ರಕಲಾ, ಪವರ್ತಯ್ಯ, ಡಿಶಾಂತ್ ಕುಮಾರ್, ಶೋಭಾ ಗಣೇಶ್, ಶೇಖರಯ್ಯ, ವಿನಯ್ ಇತರರಿದ್ದರು.