ಹಾಸನ: ಕನ್ನಡ ನಾಡಿನ ಚಹರೆ, ಸಾಂಸ್ಕೃತಿಕ ಶಕ್ತಿ, ಒಗ್ಗಟ್ಟನ್ನು ಈ ದೇಶದ ಒಕ್ಕೂಟ ವ್ಯವಸ್ಥೆಗೆ ತಿಳಿಸಿಕೊಟ್ಟಿದ್ದೇ ರಾಷ್ಟ್ರಕವಿ ಕುವೆಂಪು ಅವರು. ಕನ್ನಡ ನಾಡು ಎಂದರೆ ನೆನಪಾಗುವುದೇ ನಾಡಗೀತೆ. ಆ ಗೀತೆಯನ್ನು ರಚನೆ ಮಾಡಿದ್ದೇ ಕುವೆಂಪು ಎಂದು ನಾಡಿನ ಹೆಸರಾಂತ ಸಂಗೀತ ನಿರ್ದೇಶಕ ಡಾ.ಹಂಸಲೇಖ ಹೇಳಿದರು.
ನಗರದ ಎಂ.ಜಿ ರಸ್ತೆಯ ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರಕವಿ ಕುವೆಂಪು ಅವರ 119ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವ ಕಾಲದಲ್ಲೇ ಒಕ್ಕೂಟ ವ್ಯವಸ್ಥೆಯ ಪರಿಕಲ್ಪನೆಯನ್ನು ಹೊಂದಿದ್ದ ಅವರು ‘ಜಯ ಭಾರತ ಜನನಿಯ ತನುಜಾತೆ. ಜಯ ಹೇ ಕರ್ನಾಟಕ ಮಾತೆ’ ಎಂಬ ಗೀತೆಯನ್ನು ರಚನೆ ಮಾಡುವ ಮೂಲಕ ಭಾರತ ಮಾತೆ ನಮ್ಮ ತಾಯಿ, ಕನ್ನಡ ನಮ್ಮ ಹಕ್ಕಿನ ಪತ್ರ ಎಂಬುದನ್ನು ತೋರಿಸಿಕೊಟ್ಟಿದ್ದರು. ಕನ್ನಡಕ್ಕೆ ಕರುಳು-ಕೊರಳು ಎರಡೂ ಕುವೆಂಪುವೇ ಆಗಿದ್ದಾರೆ. ಹೊಕ್ಕಳ ಸಂಬಂಧದಂತೆ ಮಾತೃಭಾವನೆ ಮೂಡಿಸುವ ಜತೆಗೆ ಧ್ವನಿಯ ರೂಪದಲ್ಲಿ ಕೊರಳಾಗಿದ್ದಾರೆ ಎಂದು ಬಣ್ಣಿಸಿದರು.
ಕರ್ನಾಟಕದಲ್ಲಿ ಕನ್ನಡ ಭಾಷೆಯ ನಾಮಫಲಕಗಳು ಶೇ.60ರಷ್ಟು ಕಡ್ಡಾಯ ಎಂದು ರಾಜ್ಯದ ಮುಖ್ಯಮಂತ್ರಿ ಆದೇಶ ಹೊರಡಿಸಬೇಕಾದ ದುಸ್ಥಿತಿ ಬಂದಿರುವುದು, ಕನ್ನಡ ಭಾಷೆಗೆ ಆಪತ್ತು ಎದುರಾಗಿದೆ ಎಂಬ ಎಚ್ಚರಿಕೆಯನ್ನು ನೀಡುತ್ತಿದೆ. ಒಕ್ಕೂಟ ವ್ಯವಸ್ಥೆ ಉಳಿಸಿ-ಬೆಳೆಸಬೇಕಾದರೆ ಪ್ರೀತಿ ಮತ್ತು ಧರ್ಮ ಎಂಬ ನಂಬಿಕೆ ಬೇಕಾಗಿದೆ. ಅದನ್ನು ಮಠ, ಮಂದಿರಗಳು ಬೆಳೆಸಬೇಕು. ಒಗ್ಗಟ್ಟು ಮೂಡಿಸುತ್ತಾ, ಶಿಕ್ಷಣ, ವಿಚಾರ, ರಕ್ಷಣೆಯ ಅಭಯ ನೀಡುತ್ತಿರುವ ಆದಿಚುಂಚನಗಿರಿ ಮಠ ಕನ್ನಡ ನಾಡನ್ನು ಉಳಿಸುವ ನಿಟ್ಟಿನಲ್ಲೂ ಆಭಯ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನದಲ್ಲಿ, ಕುವೆಂಪು ತಮ್ಮೊಳಗಿದ್ದ ಆಧ್ಯಾತ್ಮಿಕ ಶಕ್ತಿಯಿಂದಲೇ ಸಾಹಿತ್ಯ ಕ್ಷೇತ್ರದಲ್ಲಿ ಇಷ್ಟೆಲ್ಲ ಸಾಧನೆ ಮಾಡಲು ಸಾಧ್ಯವಾಯಿತು. ಕುವೆಂಪು ಅವರನ್ನು ಕವಿ, ಸಾಹಿತಿ, ನಾಟಕಕಾರ, ಲೇಖಕ, ಚಿಂತಕರಾಗಿ ನಮ್ಮ ನಮ್ಮ ವಿವೇಚನೆಯಂತೆ ನೋಡಬಹುದು.ಆದರೆ ಅವರ ಈ ಸಾಧನೆಯ ಮೂಲ ಶಕ್ತಿಯಾಗಿ ನಿಂತದ್ದು, ಅವರು ಬಾಲ್ಯದಿಂದ ಸಾಧಿಸಿದ ಅಧ್ಯಾತ್ಮ ಶಕ್ತಿ ಎಂಬುದನ್ನು ನಾವೆಲ್ಲರೂ ಅರಿಯಬೇಕಿದೆ. ಕುವೆಂಪು, ರಾಷ್ಟ್ರಗೀತೆ ರಚನೆ ಮಾಡಿದ ರವಿಂದ್ರನಾಥ ಠಾಗೋರ್, ಮಹಾತ್ಮ ಗಾಂಧೀಜಿ ಅವರು ಆಧ್ಯಾತ್ಮಿಕ ಚಿಂತರಾಗಿದ್ದರಿಂದಲೇ ಅಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು ಎಂದು ಹೇಳಿದರು.
ಕುವೆಂಪು ತಮ್ಮ 20ನೇ ವಯಸ್ಸಿನಲ್ಲೇ ನಾಡಗೀತೆ ರಚನೆ ಮಾಡುವಂತಹ ಶಕ್ತಿ ಹೊಂದಿದ್ದರು ಎಂದರೆ ಸಾಮಾನ್ಯದ ಮಾತಲ್ಲ. ಈಗಿನ ಯುವಕರು ತಮ್ಮ 20ನೇ ವಯಸ್ಸಿನಲ್ಲಿ ಸುಮ್ಮನೆ ಓಡಾಡುತ್ತಿರುತ್ತಾರೆ. ಈ ನಿಟ್ಟಿನಲ್ಲಿ ಯುವಸಮೂಹಕ್ಕೆ ಕುವೆಂಪು ದೊಡ್ಡ ಸ್ಫೂರ್ತಿಯಾಗುತ್ತಾರೆ. ಸಂತನಾಗದವ ಕವಿಯಾಗಲಾರ ಎಂಬ ಮಾತಿದೆ, ಅದರಂತೆ ಕುವೆಂಪು ತಮ್ಮ ಪೂರ್ಣಜ್ಞಾನದಿಂದ ಕಂಡಿದ್ದನ್ನು ಬರವಣೆಗೆ ರೂಪಕ್ಕೆ ತಂದು ತಮ್ಮ ವಿಶ್ವಮಾನ ಸಂದೇಶವನ್ನು ಜಗತ್ತಿಗೆ ಸಾರಿದ್ದಾರೆ ಎಂದರು.
ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅವರು ಮಾತನಾಡಿ, ಸಂವಿಧಾನದ ಪ್ರಸ್ತಾವನೆಯಲ್ಲಿರುವ ಸಾರ್ವಭೌಮ, ಸರ್ವಧರ್ಮ, ಸಮಭಾವ, ಸಮಾಜವಾದದ ಚಿಂತನೆಯನ್ನು ಕುವೆಂಪು ಅವರು ತಮ್ಮ ಸಾಹಿತ್ಯದಲ್ಲಿ ತಿಳಿಸಿಕೊಟ್ಟಿದ್ದಾರೆ. ಮೌಢ್ಯತೆ, ಮೂಲಭೂತಹಕ್ಕುಗಳ ಬಗ್ಗೆಯೂ ಕುವೆಂಪು ಅವರು ತಮ್ಮ ಬರಹದ ಮೂಲಕ ಜನರು ವೈಚಾರಿಕತೆ ಬೆಳೆಸಿಕೊಳ್ಳಬೇಕು, ಸಮಾನ ಅವಕಾಶಗಳು ಸಿಗಬೇಕು ಎಂದು ಹೇಳಿದ್ದಾರೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಪರಿಕಲ್ಪನೆಯನ್ನು ನೀಡಿದ ಅವರ ಆಶಯದಂತೆ ಮಹಿಳೆಯರು ಸಬಲಗೊಂಡು ಎಲ್ಲಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶ್ರೀ ಆದಿಚುಂಚನಗಿರಿ ಹಾಸನ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಕುವೆಂಪು ಅವರು ಹಾಕಿಕೊಟ್ಟಿರುವ ವಿಶ್ವಮಾನವ ತತ್ವದಡಿ ನಾವೆಲ್ಲ ನಡೆಯಬೇಕು. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ಕೂಡ ಆದಿಚುಂಚಗಿರಿ ಮಠವನ್ನು ಒಂದು ಜಾತಿ, ಸಮುದಾಯಕ್ಕೆ ಸೀಮಿತಗೊಳಿಸದೆ ಧಾರ್ಮಿಕ, ಶಿಕ್ಷಣ, ಕಲೆ, ಸಾಹಿತ್ಯ ಕ್ಷೇತ್ರದ ತಳಹದಿಯಲ್ಲಿ ರೂಪಿಸಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ದೇಗುಲದ ಗರ್ಭಗುಡಿಗೆ ಹೋಗಿ ಪೂಜೆ ಸಲ್ಲಿಸುವ ವ್ಯವಸ್ಥೆಯನ್ನು ಆದಿಚುಂಚನಗಿರಿ ಮಠ ಕಲ್ಪಿಸಿಕೊಟ್ಟಿದ್ದು, ವಿಶ್ವಮಾನವ ತತ್ವವನ್ನು ಅಳವಡಿಸಿಕೊಂಡು ಮುನ್ನಡೆದುಕೊಂಡು ಬಂದಿದೆ. ಎಲ್ಲಾ ಧರ್ಮ, ಸಮುದಾಯದವನ್ನು ಒಟ್ಟುಗೂಡಿಸಿಕೊಂಡು ತಾಯಿಯ ಮಡಿಲಿನಂತೆ ಮುನ್ನಡೆಯುತ್ತಿದೆ ಎಂದು ಹೇಳಿದರು.
ಸಾಧಕರಿಗೆ ಸನ್ಮಾನ:
ಸಾಹಿತಿ ಮೃತ್ಯಂಜಯ, ಕೃಷಿಕ ಕಡಿದಾಳ್ ಪ್ರಕಾಶ್, ಸಮಾಜ ಸೇವೆ ಕ್ಷೇತ್ರದಲ್ಲಿ ಬಿ.ಈ.ಶಿವರಾಮೇಗೌಡ, ನ್ಯೂಸ್ 18 ಸಂಪಾದಕ ಹರಿಪ್ರಸಾದ್, ಸಾಮಾಜಿಕ ಕಾರ್ಯಕರ್ತ ಸೈಯದ್ ಸಜ್ಜಾದ್ ಪಾಷ, ಚಿತ್ರನಟಿ ರಿತನ್ಯಾ ಹೂವಣ್ಣಗೌಡ, ಕ್ರೀಡಾಸಾಧಕ ಎಚ್.ಎನ್. ಶಿವಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಎಚ್.ಪಿ.ಸ್ವರೂಪ್, ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಜಿ.ಎಲ್.ಮುದ್ದೇಗೌಡ, ಒಕ್ಕಲಿಗರ ಸಂಘಧ ನಿರ್ದೇಶಕ ಎಸ್.ಎಸ್.ರಘುಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಚ್.ಎಲ್ ಮಲ್ಲೇಶಗೌಡ, ಹೆಮ್ಮಿಗೆ ಮೋಹನ್, ಶ್ರೀ ಆದಿಚುಂಚನಗಿರಿ ಮಹಿಳಾ ಸಮಾಜದ ಅಧ್ಯಕ್ಷರಾದ ಭಾರತೀ ರಾಜಶೇಖರ್, ಮಠದ ವ್ಯವಸ್ಥಾಪಕ ಚಂದ್ರಶೇಖರ್, ಕಸಾಪ ಕಾರ್ಯದರ್ಶಿ ಬಿ.ಆರ್. ಬೊಮ್ಮೇಗೌಡ, ರತನ್‌ಗೌಡ ಮತ್ತಿತರರು ಹಾಜರಿದ್ದರು.