ಜಿಲ್ಲೆ

ಒಕ್ಕೂಟದಿಂದ ಬೆಳಗಾವಿ ಚಲೋ 18ಕ್ಕೆ

ಚಿತ್ರದುರ್ಗ: ಕಾಂತರಾಜ್ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಡಿ. 18ರಂದು ಬೆಳಗಾವಿ ಚಲೋ ಹಮ್ಮಿಕೊಂಡಿದ್ದು, ಸುವರ್ಣ ಸೌಧ ಮುಂಭಾಗ ಪ್ರತಿಭಟನೆ ನಡೆಸಲಿದ್ದೇವೆ ಎಂದು ಅಖಿಲ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ರಾಜ್ಯ ಸಂಚಾಲಕ ಬಿ.ಟಿ.ಜಗದೀಶ್ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವರದಿ ಜಾರಿ ಮೂಲಕ ನುಡಿದಂತೆ ನಡೆಯುವವರು ಎಂಬುದನ್ನು ಸಿಎಂ ಸಿದ್ದರಾಮಯ್ಯ ಸಾಬೀತು ಪಡಿಸಬೇಕು. ಇಲ್ಲದಿದ್ದರೆ, ಕರ್ನಾಟಕ ಹಿಂದುಳಿದ ಜಾತಿಗಳ ಒಕ್ಕೂಟ, ಶೋಷಿತ ಸಮುದಾಯಗಳ ಮಹಾ ಒಕ್ಕೂಟದಿಂದ ರಾಜ್ಯಾದ್ಯಂತ ಪ್ರತಿಭಟನೆಗೂ ಸಿದ್ಧ ಎಂದು ಸರ್ಕಾರವನ್ನು ಎಚ್ಚರಿಸಿದರು.

ಕಾಂತರಾಜ್ ವರದಿ ಅವೈಜ್ಞಾನಿಕವೆಂದು ಕೆಲವರು ಅಪಸ್ವರದ ಹೇಳಿಕೆ ನೀಡುತ್ತಿದ್ದಾರೆ. ಇದು ವೈಜ್ಞಾನಿಕವಾಗಿದ್ದು, 197 ಹಿಂದುಳಿದ ಜಾತಿಗಳಿಗೆ ನ್ಯಾಯ ಸಿಗಲಿದೆ. ಆದ್ದರಿಂದ ಕೂಡಲೇ ವರದಿಯನ್ನು ಸಂಪುಟದ ಮುಂದಿಟ್ಟು ಚರ್ಚಿಸಿ, ಸಾರ್ವಜನಿಕ ಅಹವಾಲು ಸ್ವೀಕರಿಸಿ ಅನುಷ್ಠಾನಕ್ಕೆ ತರಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಪ್ರಬಲ ಜಾತಿಗಳಿಂದ 2‘ಎ’ಗೆ ಸೇರಿಸಬೇಕೆಂದು ಹೋರಾಟ ನಡೆಯುತ್ತಿವೆ. ಇದು ಗಲಾಟೆ, ಜಾತಿಗಳ ಮಧ್ಯೆ ಹೋರಾಟಕ್ಕೂ ಕಾರಣವಾಗಬಹುದು. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡದಿರುವುದಕ್ಕೆ ಸಿದ್ದರಾಮಯ್ಯ ಅವರನ್ನು ಲಿಂಗಾಯತ ವಿರೋಧಿ ಎನ್ನುವುದರಲ್ಲಿ ಅರ್ಥವಿಲ್ಲ. ಈ ಸಮುದಾಯ 2‘ಎ’ ಅಡಿಯಲ್ಲಿ ಬರಲು ಬಿಡುವುದಿಲ್ಲ ಎಂದು ತಿಳಿಸಿದರು.

ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ಆರ್.ವೆಂಕಟರಾಮಯ್ಯ, ಜಿಲ್ಲಾ ಘಟಕದ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಎಚ್.ಮಂಜಪ್ಪ, ಸಂಚಾಲಕರಾದ ಡಿ.ದುರುಗೇಶ್, ಸಾಧಿಕ್‌ವುಲ್ಲಾ ಇತರರಿದ್ದರು.