ಜಿಲ್ಲೆ

ಒಕ್ಕೂಟದಲ್ಲಿ ಪಾರದರ್ಶಕತೆ ಇರಲಿ: ಅವ್ಯವಹಾರದ ಆರೋಪದಿಂದ ಹಾಲು ಉತ್ಪಾದಕರಲ್ಲಿ ಗೊಂದಲ

ಚಿಕ್ಕಬಳ್ಳಾಪುರ: ಕೋಚಿಮುಲ್ ವಿಭಜನೆಯ ವಿಚಾರವಾಗಿ ನಿರ್ದೇಶಕರ ಹಗ್ಗ ಜಗ್ಗಾಟದ ಗಲಾಟೆಯಿಂದ ಒಕ್ಕೂಟದಲ್ಲಿ ಕೇಳಿ ಬರುತ್ತಿರುವ ಟೀಕೆ ಪ್ರತಿ ಟೀಕೆಗಳ ನಡುವೆ ಅವ್ಯವಹಾರದ ಆರೋಪಗಳು ಹೊರ ಬರುತ್ತಿರುವುದು ಸಹಕಾರಿ ಕ್ಷೇತ್ರದಲ್ಲಿ ಗೊಂದಲಕ್ಕೆ ಕಾರಣವಾಗಿದೆ.

ದುಂದು ವೆಚ್ಚ, ಸಿಬ್ಬಂದಿ ನೇಮಕಾತಿ, ಗುತ್ತಿಗೆ ವಿಚಾರವಾಗಿ ಹಲವು ಲೋಪಗಳು ನಡೆದಿರುವುದರ ಬಗ್ಗೆ ಒಕ್ಕೂಟದ ನಿರ್ದೇಶಕರು, ಮಾಜಿ ನಿರ್ದೇಶಕರು ಬಹಿರಂಗ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ ತೀರ್ಮಾನಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಹೀಗೆ ನಿರಂತರ ಟೀಕೆಗಳು, ಆರೋಪಗಳು ಹಾಲು ಉತ್ಪಾದಕರಲ್ಲಿ ಗೊಂದಲ ಮೂಡಿಸಿವೆ. ಸೂಕ್ತ ತನಿಖೆ ಕೈಗೊಂಡು, ಪಾರದರ್ಶಕತೆಯನ್ನು ಕಾಪಾಡಬೇಕೆಂಬ ಒತ್ತಾಯ ಕೇಳಿ ಬಂದಿದೆ.

2020ನೇ ಸಾಲಿನಲ್ಲಿ 1 ಲೀಟರ್ ಹಾಲಿಗೆ ಒಂದು ವರ್ಷಕ್ಕೆ ಟೆಟ್ರಾಪ್ಯಾಕ್ ಮತ್ತು ಪ್ರೀಪ್ಯಾಕ್ ಹಾಲು ನಿರ್ವಹಣೆಗಾಗಿ ಒಕ್ಕೂಟ 47 ಪೈಸೆ ಖರ್ಚು ಮಾಡಿದೆ. ಆದರೆ, ಇದೀಗ ಖಾಸಗಿ ಸಂಸ್ಥೆಗೆ 91 ಪೈಸೆಗೆ ಗುತ್ತಿಗೆ ನೀಡಿದ್ದು, ಇದರಿಂದ ಒಂದು ತಿಂಗಳಿಗೆ 50 ಲಕ್ಷ ರೂಪಾಯಿ ಹೆಚ್ಚುವರಿಯಾಗಿ ನೀಡುವುದರೊಂದಿಗೆ ಒಂದು ವರ್ಷಕ್ಕೆ ಒಕ್ಕೂಟಕ್ಕೆ 6 ಕೋಟಿ ರೂಪಾಯಿ ನಷ್ಟ ಉಂಟಾಗುತ್ತಿದೆ ಎಂಬುದಾಗಿ ಕೋಚಿಮುಲ್ ನಿರ್ದೇಶಕ ವಿ.ಮಂಜುನಾಥರೆಡ್ಡಿ ಆರೋಪಿಸಿದ್ದಾರೆ.

ಹಾಗೆಯೇ ಟೆಟ್ರಾಪ್ಯಾಕ್ ಸಿದ್ಧಪಡಿಸುವ ಯಂತ್ರಗಳ ನಿರ್ವಹಣೆ ಜವಾಬ್ದಾರಿ ಸಂಪೂರ್ಣವಾಗಿ ಕಂಪನಿ ಭರಿಸಬೇಕಾಗುತ್ತದೆ. ಆದರೆ, ಯಂತ್ರಗಳ ನಿರ್ವಹಣೆ ಹೆಸರಿನಲ್ಲಿ ಒಕ್ಕೂಟದ ವತಿಯಿಂದ ಲಕ್ಷಾಂತರ ರೂಪಾಯಿ ಹಣ ಡ್ರಾ ಮಾಡಿ ಗುತ್ತಿಗೆ ಸಂಸ್ಥೆಗೆ ನೀಡುವ ಮೂಲಕ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬುದಾಗಿಯೂ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಒಕ್ಕೂಟದ ಅಧ್ಯಕ್ಷರು, ಆಡಳಿತ ಮಂಡಳಿ ಸಭೆಯಲ್ಲಿ ಕೈಗೊಂಡ ತೀರ್ಮಾನಗಳನ್ನು ಅನುಷ್ಠಾನಗೊಳಿಸಲಾಗಿದೆಯೇ ಹೊರತು ಯಾವುದೇ ಅವ್ಯವಹಾರ ನಡೆದಿಲ್ಲ ಎನ್ನುತ್ತಿದ್ದಾರೆ.

ದಾಖಲೆ ಸಮೇತ ಹಗರಣ ಬಯಲು: ಮುಂದಿನ ದಿನಗಳಲ್ಲೂ ಒಕ್ಕೂಟದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಒಂದೊಂದೇ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಕೋಚಿಮುಲ್ ನಿರ್ದೇಶಕ ವಿ.ಮಂಜುನಾಥರೆಡ್ಡಿ ತಿಳಿಸಿದ್ದಾರೆ.

ಆಡಳಿತ ಮಂಡಳಿ ಸಭೆಯಲ್ಲಿ ಟೆಟ್ರಾಪ್ಯಾಕ್ ಮತ್ತು ಪ್ರೀ ಪ್ಯಾಕ್ ಹಾಲು ಗುತ್ತಿಗೆ ನೀಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಆದರೆ, ಇದನ್ನು ಮರೆ ಮಾಚಿ ಅಧ್ಯಕ್ಷರು, ಆಡಳಿತ ಮಂಡಳಿಯ ಒಮ್ಮತ ತೀರ್ಮಾನ, ಗೋಲ್ ಮಾಲ್ ಆರೋಪ ಮಾಡುವವರಿಗೆ ಮಾಹಿತಿ ಇಲ್ಲ ಎಂಬುದಾಗಿ ಹೇಳಿಕೆ ನೀಡಿರುವುದು ದುರದೃಷ್ಟಕರ ಎಂದು ನಗರದ ಪತ್ರಕರ್ತರ ಭವನದ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಕೋಚಿಮುಲ್ ನಿರ್ದೇಶಕ ಜೆ.ಕಾಂತರಾಜ್ ಮಾತನಾಡಿ, ಗೋಲ್ಡನ್ ಡೈರಿ ನಿರ್ಮಾಣದ ವಿಚಾರವಾಗಿ ಯಾರೂ ತಕರಾರು ತೆಗೆಯುತ್ತಿಲ್ಲ. ಎಲ್ಲರೂ ಬೆಂಬಲಿಸುತ್ತಿದ್ದಾರೆ. ಆದರೆ, ಡಿಪಿಆರ್ ತಯಾರಿಕೆಯಲ್ಲಿನ ವ್ಯತ್ಯಾಸದಿಂದಾಗಿ ಅನುಮೋದನೆ ವಿಳಂಬವಾಗಿದೆ. ಇದಕ್ಕೆ ನಿರ್ದೇಶಕರು ಯಾರೂ ಕಾರಣರಲ್ಲ. ಇದು ಗೊತ್ತಿದ್ದರೂ ಸುಳ್ಳು ಮಾಹಿತಿ ನೀಡಿ ಗೊಂದಲ ಸೃಷ್ಟಿಸಲಾಗುತ್ತಿದೆ. ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ರಚನೆಗೆ ದುರುದ್ದೇಶದಿಂದ ಅಡ್ಡಿಪಡಿಸಿ, ಸ್ವಾರ್ಥ ರಾಜಕೀಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಒಕ್ಕೂಟದ ನಿರ್ದೇಶಕರಾದ ಸುನಂದಮ್ಮ, ಎಸ್.ವಿ.ಸುಬ್ಬಾರೆಡ್ಡಿ ಇದ್ದರು.