ಜಿಲ್ಲೆ

ಒಕ್ಕೂಟದ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ

ಮದ್ದೂರು: ಹಾಲು ಉತ್ಪಾದಕರಿಗೆ ಅನುಕೂಲವಾಗಲೆಂಬ ನಿಟ್ಟಿನಲ್ಲಿ ಒಕ್ಕೂಟವು ಹಲವು ಸೌಲಭ್ಯಗಳನ್ನು ಒದಗಿಸುತ್ತಿದೆ. ಇವುಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕ ಅಭಿವೃದ್ಧಿ ಹೊಂದಬೇಕು ಎಂದು ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ತಿಳಿಸಿದರು.

ತಾಲೂಕಿನ ಕೊಪ್ಪ ಹೋಬಳಿಯ ಸೀನಪ್ಪನದೊಡ್ಡಿ ಗ್ರಾಮದಲ್ಲಿ ಶುಕ್ರವಾರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಿಂದ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಅವರು ಮಾತನಾಡಿದರು. ಉತ್ಪಾದಕರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ರೈತ ಕಲ್ಯಾಣ ನಿಧಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ. ಒಕ್ಕೂಟವು ರೈತರಿಗೆ ಉಪಯುಕ್ತ ಯೋಜನೆಯನ್ನು ಕಲ್ಪಿಸಬೇಕೆಂಬ ಉದ್ದೇಶದಿಂದ ರಾಸುಗಳಿಗೆ ವಿಮೆ, ಕಾಲುಬಾಯಿ ಜ್ವರ ಲಸಿಕೆ ಇನ್ನಿತರ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದರು.

ಮನ್‌ಮುಲ್ ನಿರ್ದೇಶಕ ಹರೀಶ್‌ಬಾಬು ಮಾತನಾಡಿ, ಉತ್ಪಾದಕರಿಗೆ ಸರ್ಕಾರ ಹಲವು ಸೌಲಭ್ಯಗಳನ್ನು ಒದಗಿಸುವ ಜತೆಗೆ ಪ್ರತಿ ಲೀಟರ್ ಹಾಲಿಗೆ 5 ರೂ. ಪ್ರೋತ್ಸಾಹ ಧನ ನೀಡುತ್ತಿದೆ. ರೈತರ ಆರ್ಥಿಕಾಭಿವೃದ್ಧಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಪ್ರತಿ ಲೀಟರ್‌ಗೆ 4 ರೂ. ಹೆಚ್ಚಳ ಮಾಡಿ ಹಾಲು ಉತ್ಪಾದಕರ ನೆರವಿಗೆ ಸರ್ಕಾರ ಧಾವಿಸಿದೆ ಎಂದು ಹೇಳಿದರು.

ಉತ್ಪಾದಕರು ಗುಣಮಟ್ಟದ ಹಾಲು ಪೂರೈಕೆ ಮಾಡುವುದರ ಮೂಲಕ ಸಹಕಾರ ಸಂಘ ಹಾಗೂ ಒಕ್ಕೂಟದ ಶ್ರೇಯೋಭಿವೃದ್ಧಿಗೆ ಕೈಜೋಡಿಸಬೇಕು. ಒಕ್ಕೂಟಕ್ಕೆ ಪ್ರತಿ ದಿನ 9 ಲಕ್ಷ ಲೀಟರ್ ಹಾಲು ಸರಬರಾಜಾಗುತ್ತಿದೆ. ಆಡಳಿತ ಮಂಡಳಿ ಮಾರುಕಟ್ಟೆ ವಿಸ್ತರಣೆಗೆ ಹೆಚ್ಚಿನ ಒತ್ತು ನೀಡಿ ಉತ್ಪಾದಕರಿಗೆ ಸಕಾಲದಲ್ಲಿ ಹಣ ನೀಡಲು ಕ್ರಮ ವಹಿಸಲಾಗಿದೆ ಎಂದರು.

ಸೀನಪ್ಪನದೊಡ್ಡಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಅಧ್ಯಕ್ಷೆ ಬಿ.ಈ.ವಿನಯಾ, ಉಪಾಧ್ಯಕ್ಷೆ ಶೃತಿ, ನಿರ್ದೇಶಕರಾದ ಶೋಭಾ, ಸುಮಿತ್ರಾ, ತಾಯಮ್ಮ, ಶ್ವೇತಾ, ಅಕ್ಷತಾ, ಮಂಜುಳಾ, ರತ್ನಮ್ಮ, ನಾಗಮ್ಮ, ಕಾರ್ಯದರ್ಶಿ ಸೌಂದರ್ಯ ಹಾಜರಿದ್ದರು.