ಜಿಲ್ಲೆ

ಒಕ್ಕಲೆಬ್ಬಿಸಿದರೆ ಅರಣ್ಯ ಇಲಾಖೆಗೆ ಮುತ್ತಿಗೆ: ಐ.ಡಿ.ಹಳ್ಳಿ, ಮಿಡಿಗೇಶಿ ರೈತರ ಸಭೆಯಲ್ಲಿ ಮಾಜಿ ಶಾಸಕ ಕೆ.ಎನ್.ರಾಣ್ಣ ಎಚ್ಚರಿಕೆ

ಮಧುಗಿರಿ: ಸಾಗುವಳಿ ಪತ್ರ ಮತ್ತು ಪಹಣಿ ಹೊಂದಿದ್ದರೂ ರೈತರನ್ನು ಒಕ್ಕಲೆಬ್ಬಿಸುತ್ತಿರುವ ಅರಣ್ಯ ಇಲಾಖೆ ಕಚೇರಿಗೆ 25 ಸಾವಿರ ರೈತರೊಂದಿಗೆ ಮುತ್ತಿಗೆ ಹಾಕಲಾಗುವುದು ಎಂದು ಮಾಜಿ ಶಾಸಕ ಕೆ.ಎನ್.ರಾಣ್ಣ ಎಚ್ಚರಿಸಿದರು.

ಬದ್ರೆಹಳ್ಳಿಯ ತೇರಿನಬೀದಿಯಲ್ಲಿ ಶನಿವಾರ ಐ.ಡಿ.ಹಳ್ಳಿ ಹಾಗೂ ಮಿಡಿಗೇಶಿ ವ್ಯಾಪ್ತಿಯ ರೈತರ ಸಭೆಯಲ್ಲಿ ಮಾತನಾಡಿದರು.

ಹಲವು ವರ್ಷಗಳಿಂದ ಈ ಭಾಗದ ರೈತರು ಜಮೀನುಗಳಲ್ಲಿ ಉಳುಮೆ ಮಾಡಿ ಜೀವನ ಸಾಗಿಸುತ್ತಿದ್ದು, ಈಗ ಬಂದು ಜಮೀನು ಬಿಟ್ಟುಕೊಡಿ ಎಂದು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿರುವುದು ಯಾವ ನ್ಯಾಯ..?, ಯಾವುದೇ ಕಾರಣಕ್ಕೂ ಜಮೀನು ಬಿಟ್ಟು ಕೊಡಬೇಡಿ. ಈ ಸಂಬಂಧ ಮುಖಂಡರೊಂದಿಗೆ ಸಭೆ ನಡೆಸಿ ಹೋರಾಟಕ್ಕೆ ಸಜ್ಜಾಗಿ ಎಂದರು.

ತೋಟ, ಗದ್ದೆ ಹೊಂದಿರುವ ರೈತರಿಗೆ ಯಾವುದೇ ಅಧಿಕಾರಿಗಳು ತೊಂದರೆ ಕೊಡಬಾರದು. ಸಂಬಂಧಪಟ್ಟ ಇಲಾಖೆ ದಾಖಲಾತಿ ಸರಿಪಡಿಸಿ. ಈ ಮೊದಲೇ ಸಮರ್ಪಕ ದಾಖಲೆ ಒದಗಿಸಿದ್ದರೆ ಈ ಗತಿ ಬರುತ್ತಿರಲಿಲ್ಲ. ಕಾನೂನಿಗಿಂತ ಮಾನವೀಯ ಮೌಲ್ಯ ದೊಡ್ಡದು ಎಂದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಜಿ.ಎಸ್.ಬಸವರಾಜು ಅವರನ್ನು ಬೆಂಬಲಿಸಿದ್ದೇ ಹೊರತು ಬಿಜೆಪಿಯನ್ನಲ್ಲ. ಜಿಎಸ್‌ಬಿ ಅವರದು ಹಳೆಯ ಕಾಂಗ್ರೆಸ್ಸಿನ ಸಂಬಂಧ. ಅವರು ಮತ್ತು ಆರ್.ರಾಜೇಂದ್ರ ಅವರನ್ನು ಗೆಲ್ಲಿಸಿದ ಕೀರ್ತಿ ನಮ್ಮದು. ಜೆಡಿಎಸ್ ದ್ವಿಮುಖ ನೀತಿ ಅನುಸರಿಸುತ್ತಿದ್ದು, ಒಂದು ಕಡೆ ಗೋ ಮಸೂದೆ ಬೆಂಬಲಿಸಿ, ಮತ್ತೊಂದು ಕಡೆ ವಿರೋಧಿಸುತ್ತಿದೆ. ರಾಮಗರ, ಚನ್ನಪಟ್ಟಣಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡದೆ ಇತ್ತೀಚೆಗೆ ನಡೆದ 3 ಉಪಚುನಾವಣೆ ಕ್ಷೇತ್ರಗಳಿಗೆ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿರುವುದು ನೋಡಿದರೆ ಗೆಲ್ಲುವ ಕಡೆ ಟಿಕೆಟ್ ನೀಡದೆ. ಸೋಲುವ ಕಡೆ ಟಿಕೆಟ್ ನೀಡಿ ಚುನಾವಣೆ ಸಮಯದಲ್ಲಿ ಮುಸ್ಲಿಂ ಸಮುದಾಯವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ನಾನೂ ಸಹ ಹಿಂದುನೇ, ನಾವು ಮಹಾತ್ಮಗಾಂಧಿ ಹಿಂದುತ್ವ ಅನುಕರಿಸಿದರೆ ಬಿಜೆಪಿ ನಾಥೂರಾಮ್ ಗೋಡ್ಸೆ ಹಿಂದುತ್ವ ಅನುಕರಣೆ ಮಾಡುತ್ತಾ, ಜಾತಿ, ಧರ್ಮಗಳ ನಡುವೆ ವಿಷ ಬೀ ಬಿತ್ತುತ್ತಿದ್ದಾರೆ ಎಂದು ಕುಟುಕಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು ಮಾತನಾಡಿ, ಅರಣ್ಯ ಇಲಾಖೆ ಈ ಭಾಗದ ರೈತರ ಮೇಲೆ ದೌರ್ಜನ್ಯ ಮಾಡುತ್ತಿರುವುದು ಖಂಡನೀಯ. ಅನೇಕ ದಶಕಗಳಿಂದ ಭೂಮಿ ನಂಬಿಕೊಂಡು ಜೀವನ ನಡೆಸುತ್ತಿರುವ ರೈತರಿಗೆ ತೊಂದರೆ ಕೊಡುವುದನ್ನು ನಿಲ್ಲಿಸಬೇಕು ಎಂದರು.

ಗ್ರಾಪಂ ಅಧ್ಯಕ್ಷ ಪಂಚಾಕ್ಷರಯ್ಯ, ಸಾವಿತ್ರಮ್ಮ, ಡಿ.ಎಚ್.ನಾಗರಾಜು, ಭವ್ಯ ಕೇಶವ ಮೂರ್ತಿ, ಉಪಾಧ್ಯಕ್ಷೆ ಗೌರಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಲ್ಲಿಕಾರ್ಜುನಯ್ಯ, ಎಸ್.ಆರ್.ರಾಗೋಪಾಲ, ಮುಖಂಡರಾದ ಫಾಜಿಲ, ಆರ್.ನಾರಾಯಣ, ರಾಮಚಂದ್ರ, ಕಾಂತರಾಜು, ಸಿದ್ದಗಂಗಪ್ಪ ಎಂ.ವಿ.ಮೂಡ್ಲಗಿರೀಶ್, ಸಿದ್ದಾಪುರ ರಂಗಶ್ಯಾಮಣ್ಣ ಇತರರಿದ್ದರು.

ಜಾತಿ ಹೆಸರೆಳುವ ಜೆಡಿಎಸ್: ಜೆಡಿಎಸ್ ಕೇವಲ ಜಾತಿ ಹೆಸರೇಳಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಕನಿಷ್ಠ ಸ್ಥಾನಗಳು ಗೆದ್ದರೂ ಸಿಎಂ, ಪಿಎಂ ಸ್ಥಾನ ಪಡೆದು ಕಾಂಗ್ರೆಸ್ ಬೆಂಬಲದಿಂದ ಅಧಿಕಾರ ಅನುಭವಿಸಿ ಈಗ ಕಾಂಗ್ರೆಸ್ ವಿರುದ್ಧ ಹೇಳಿಕೆ ನೀಡುವ ಮಟ್ಟಕ್ಕೆ ಬಂದಿದೆ ಎಂದು ರಾಜಣ್ಣ ವ್ಯಂಗ್ಯವಾಡಿದರು.

ಮಧುಗಿರಿ ಕ್ಷೇತ್ರದ ಜನ ಸ್ವಾಭಿಮಾನಿಗಳಾಗಿದ್ದು, ಈ ಬಾರಿ ಜಾತಿ ಮತ್ತು ಹಣ ಆಮಿಷಕ್ಕೆ ಒಳಗಾಗದೆ ಮತ ಚಲಾಯಿಸಿದ್ದಾರೆ. ಮಧುಗಿರಿ ಕ್ಷೇತ್ರದಲ್ಲಿ ಹಣದುಬ್ಬರವಿದ್ದರೂ ಚುನಾವಣೆ ಗೆಲ್ಲಬಹುದು ಎಂದು ಹೇಳಿಕೊಂಡು ಓಡಾಡುತ್ತಿರುವವರಿಗೆ ತಕ್ಕ ಪಾಠ ಕಲಿಸಲಿದ್ದು, ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬೀಗಲಿದೆ. ಕೆ.ಎನ್.ರಾಣ್ಣ, ಮಾಜಿ ಶಾಸಕ