ಚಾಮರಾಜನಗರ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಗರದ ಹೊರವಲಯದಲ್ಲಿ ಖರೀದಿಸಿ ತಾಲೂಕು ಒಕ್ಕಲಿಗರ ಸಂಘಕ್ಕೆ ನೀಡಿರುವ ನಿವೇಶನದಲ್ಲಿ ಕಟ್ಟಡ ನಿರ್ಮಿಸಲು 25 ಲಕ್ಷ ರೂ. ಅನುದಾನ ನೀಡುವುದಾಗಿ ವಿಧಾನ ಪರಿಷತ್ತಿನ ಸದಸ್ಯ ಸಿ.ಎನ್.ಮಂಜೇಗೌಡ ಭರವಸೆ ನೀಡಿದರು.
ನಗರದ ಕೊಳದ ಬೀದಿಯಲ್ಲಿರುವ ಒಕ್ಕಲಿಗರ ಸಮುದಾಯ ಭವನದಲ್ಲಿ ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆ ಕಾರ್ಯಕ್ರಮ ಹಾಗೂ ತಾಲೂಕು ಒಕ್ಕಲಿಗರ ಸಂಘದ 2025ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕುವೆಂಪು ಅವರು ಕನ್ನಡದ ಅಗ್ರಮಾನ್ಯ ಕಾದಂಬರಿಕಾರ, ನಾಟಕಕಾರ, ವಿಮರ್ಶಕ, ಚಿಂತಕರಾಗಿ ಕನ್ನಡ ನಾಡಿಗೆ ನೀಡಿದ ಕೊಡುಗೆ ಅನನ್ಯವಾಗಿದೆ. ಅವರನ್ನು ಕವಿಯಾಗಿ, ಋಷಿಯಾಗಿ ನಾಟಕಗಳ ಮೂಲಕ ನೋಡುವಾಗ ಅವರ ಆಲೋಚನಾ ಕ್ರಮಕ್ಕೆ ಇರುವ ವೈಚಾರಿಕ ನಿಲುವು ತಿಳಿಯುತ್ತದೆ ಎಂದರು.
ತಾಲೂಕು ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಕೆ.ಪುಟ್ಟಸ್ವಾಮಿಗೌಡ ಮಾತನಾಡಿ, ಬೆಂಗಳೂರು ನಿರ್ಮಾತೃ ಕೆಂಪೇಗೌಡರು, ರಾಷ್ಟ್ರಕವಿ ಕುವೆಂಪು ಅವರು ದೊಡ್ಡ ವ್ಯಕ್ತಿಗಳಾಗಿ ಬೆಳೆದು ಈ ನಾಡಿಗೆ ತಮ್ಮಯಾದ ಕೊಡುಗೆ ನೀಡಿದ್ದಾರೆ. ಅವರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ತಾಲೂಕು ಒಕ್ಕಲಿಗರ ಸಂಘದ ಸುದರ್ಶನ್‌ಗೌಡ ಮಾತನಾಡಿ, ಒಕ್ಕಲಿಗ ಸಮುದಾಯಕ್ಕೆ ತನ್ನದೆ ಆದ ಇತಿಹಾಸ ಹೊಂದಿದೆ. ಕುವೆಂಪು ಅವರು ಇಪ್ಪತ್ತನೆಯ ಶತಮಾನ ಕಂಡ ಅದ್ಭುತ ಕವಿಗಳಲ್ಲಿ ಒಬ್ಬರು. ವರಕವಿ ಬೇಂದ್ರೆ ಅವರಿಂದ ಯುಗದ ಕವಿ, ಜಗದ ಕವಿ ಎನಿಸಿಕೊಂಡವರು. ವಿಶ್ವಮಾನವ ಸಂದೇಶ ನೀಡಿದವರು. ಕನ್ನಡದ ಮೊದಲನೆಯ ಜ್ಞಾನಪೀಠ ಪ್ರಶಸ್ತಿ, ಎರಡನೇ ರಾಷ್ಟ್ರಕವಿಯಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು ಎಂದರು.
ಇದೇ ವೇಳೆ ಕರ್ನಾಟಕ ಸೇನಾ ಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಅವರನ್ನು ಸನ್ಮಾನಿಸಲಾಯಿತು. ಕೋಶಾಧ್ಯಕ್ಷ ಜಿ.ನಾರಾಯಣಪ್ರಸಾದ್, ಉಪಾಧ್ಯಕ್ಷರಾದ ಚಿನ್ನುಮುತ್ತು, ಪಿ.ಕೆ.ರಾಜು, ಕೆ.ಎಂ.ಮಂಜು, ಪ್ರಧಾನ ಕಾರ್ಯದರ್ಶಿ ಆರ್.ಸೋಮಶೇಖರ್, ಸಹ ಕಾರ್ಯದರ್ಶಿ ನಾಗೇಂದ್ರ ಗೌಡ, ನಿರ್ದೇಶಕರಾದ ಮರಿಸ್ವಾಮಿಗೌಡ, ಮಹೇಶ್‌ಗೌಡ, ಚಿಕ್ಕತಾಯಮ್ಮ, ಮಣಿ, ಶೇಖರ್ ಹೊಮ್ಮ, ಪುರುಷೋತ್ತಮ್, ಸಿ.ಸಿ.ರಮೇಶ್, ಅರುಣ್‌ಕುಮಾರ್ ಇದ್ದರು.